ಚಾಕುವಿನಿಂದ ಇರಿದು ತಂದೆಯನ್ನೇ ಕೊಂದ ಮಗ

Published on

ಸಕಲೇಶಪುರ: ಮನೆ ಕಟ್ಟಲು ಸಾಲ ತೆಗೆದುಕೊಡಲಿಲ್ಲ ಎಂಬ ಕಾರಣಕ್ಕೆ ತಾಲೂಕಿನ ಕಸಬಾ ಹೋಬಳಿ ಮಳಲಿ ಗ್ರಾಮದಲ್ಲಿ ಮಗನೇ ತಂದೆಯ ಎದೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.
ರವಿ (46) ಮಗನಿಂದಲೇ ಹತ್ಯೆಗೀಡಾದ ತಂದೆ. ಸುಶೀಲಾ ಮತ್ತು ರವಿ ದಂಪತಿಗೆ ಸಚಿನ್ ಎಂಬ ಮಗನಿದ್ದು, ತಂದೆ ಮತ್ತು ಮಗ ಇಬ್ಬರಿಗೂ ಕುಡಿಯುವ ಅಭ್ಯಾಸವಿತ್ತು. ತಾವು ವಾಸವಾಗಿರುವ ಮನೆ ಹಳೆಯದಾಗಿರುವುದರಿಂದ ಹೊಸ ಮನೆ ಕಟ್ಟಲು ಕುಟುಂಬ ಸದಸ್ಯರು ಮಾತನಾಡಿಕೊಂಡಿದ್ದರು. ರವಿ ಖಾಸಗಿ ಸಂಘದ ಸದಸ್ಯರಾಗಿದ್ದು, ಸಂಘದಿಂದ ಸಾಲ ತೆಗೆದುಕೊಡುವಂತೆ ಮಗ ತಂದೆಗೆ ದುಂಬಾಲು ಬಿದ್ದಿದ್ದ. ಆದರೆ, ಸಾಲ ತೆಗೆದುಕೊಡಲು ತಂದೆ ಒಪ್ಪಿರಲಿಲ್ಲ. ಇದೇ ವಿಷಯವಾಗಿ ಇಬ್ಬರ ನಡುವೆ ಎರಡು ಬಾರಿ ಗಲಾಟೆ ನಡೆದಿತ್ತು. ಕಳೆದ ಬುಧವಾರ ರಾತ್ರಿ ಮದ್ಯ ಸೇವಿಸಿ ಬಂದ ಸಚಿನ್ ಇದೇ ವಿಷಯವಾಗಿ ತಂದೆಯೊಡನೆ ಜಗಳ ಆರಂಭಿಸಿದನು. ‘ಸಾಲ ಕೊಡಿಸದಮೇಲೆ ನೀನೇಕೆ ಬದುಕಿರಬೇಕು’ ಎಂದು ಚಾಕು ತೆಗೆದುಕೊಂಡು ತಂದೆಯ ಎದೆಗೆ ಚುಚ್ಚಿ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಚಿನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಾಯಿ ಸುಶೀಲಾ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net