ಚಾಂಗಲೇರಾ ವೀರಭದ್ರ ಜಾತ್ರೆ ನಾಳೆಯಿಂದ

9 HBD 1
ಜಾತ್ರಾ ಮಹೋತ್ಸವಕ್ಕೆ ಸಿದ್ದಗೊಂಡ ಚಾಂಗಲೇರದ ಶ್ರೀ ವೀರಭದ್ರೇಶ್ವರ ದೇವಸ್ಥಾನ ವಿಹಂಗಮ ನೋಟ.
Published on

ಚಿಟಗುಪ್ಪ: ತಾಲೂಕಿನ ಚಾಂಗಲೇರಾದ ಶ್ರೀ ವೀರಭದ್ರೇಶ್ವರ ಜಾತ್ರೆ ಸೋಮವಾರದಿಂದ ಐದು ದಿನ ನಡೆಯಲ್ಲಿದ್ದು, ದೇವಸ್ಥಾನ ಆಡಳಿತ ಮಂಡಳಿ ಭರದ ಸಿದ್ಧತೆ ಕೈಗೊಂಡಿದ್ದು, ಉತ್ಸವದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.

ಕಲ್ಯಾಣ ಕರ್ನಾಟಕದ ಪ್ರಮುಖ ದೇವಸ್ಥಾನಗಳಲ್ಲಿ ಒಂದಾದ ಚಾಂಗಲೇರಾ ಶ್ರೀ ವೀರಭದ್ರೇಶ್ವರ ಲಕ್ಷಾಂತರ ಭಕ್ತರನ್ನು ಹೊಂದಿದ್ದು, ಭಕ್ತರ ಬಯಕೆ ಈಡೇರಿಸುವ ಪುಣ್ಯದ ತಾಣವಾಗಿದೆ. ದೇವಸ್ಥಾನವು ತನ್ನದೇ ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ಭವ್ಯ ಪರಂಪರೆ ಹೊಂದಿದೆ.

೧೭ನೇ ಶತಮಾನದಲ್ಲಿ ಶ್ರೀ ವೀರಭದ್ರ ಮೂರ್ತಿ ಉದ್ಭವಗೊಂಡಿದ್ದು, ಅಂದಿನಿಂದ ದೇವಸ್ಥಾನ ಪುಣ್ಯ ಕ್ಷೇತ್ರವಾಗಿದ್ದು, ಪ್ರವಾಸಿಗರ ತಾಣವಾಗಿಯೂ ರೂಪಗೊಳ್ಳುತ್ತಿದೆ. ದೇವಸ್ಥಾನದ ಪಕ್ಕದಲ್ಲಿಯೇ ಅರಣ್ಯ ಇಲಾಖೆ ಹಾಗೂ ದೇವಸ್ಥಾನ ಸಹಯೋಗದಿಂದ ನಿರ್ಮಿಸಿರುವ ಉದ್ಯಾನವನ ಹಾಗೂ ಅದರಲ್ಲಿರುವ ಮಕ್ಕಳ ಆಟಿಕೆಗಳು ದೇವಸ್ಥಾನಕ್ಕೆ ಬರುವ ಭಕ್ತರನ್ನು ತನ್ನೆಡೆ ಆಕರ್ಷಿಸುತ್ತಿದೆ.

ಉಗ್ರ ಸ್ವರೂಪನಾಗಿರುವ ವೀರಭದ್ರನ ಜಾಗೃತ ಸ್ಥಳ ಇದ್ದಾಗಿದ್ದು, ಈ ದೇವರು ಭಕ್ತರ ಆರಾಧ್ಯ ದೈವ ಹಾಗೂ ಶಿಷ್ಟರಕ್ಷಕರಾಗಿದ್ದು, ಭಕ್ತರ ಕಲ್ಪವೃಕ್ಷವಾಗಿದ್ದಾರೆ. ರಾಜ್ಯ ಸೇರಿ ತೆಲಂಗಾಣ, ಆಂಧ್ರ, ಮಹಾರಾಷ್ಟçದ ಅಪಾರ ಭಕ್ತ ಸಮೂಹ ಹೊಂದಿದೆ. ಪ್ರತಿ ಅಮಾವಾಸ್ಯೆ ಹಾಗೂ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತ ಸಮೂಹವೇ ದೇವರ ಮಹಿಮೆಗೆ ಸಾಕ್ಷಿ. ಈ ಪುಣ್ಯ ಕ್ಷೇತ್ರದಲ್ಲಿ ಒಂದೇ ದಿನ ೪೦-೫೦ ಮದುವೆಗಳು ನಡೆದ ಉದಾಹರಣೆಗಳಿವೆ.

ಮಾಜಿ ಮುಖ್ಯಮಂತ್ರಿ ದಿ.ವೀರೇಂದ್ರ ಪಾಟೀಲ್ ಸೇರಿದಂತೆ ಅಸಂಖ್ಯಾತ ಭಕ್ತರ ಕುಲದೇವರು ಚಾಂಗಲೇರಾ ವೀರಭದ್ರನ ಸ್ಥಾನದಲ್ಲಿ ನಿತ್ಯ ದಾಸೋಹ ನಡೆಯುತ್ತದೆ. ದಿನದಿಂದ ದಿನಕ್ಕೆ ಭಕ್ತರ ಸಹಕಾರದಿಂದ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಮೂಲಸೌಕರ್ಯ ಒದಗಿಸಿ ಕೊಡುವ ಕಾರ್ಯ ನಡೆಯಬೇಕು. ಇಲ್ಲಿನ ಜಾತ್ರೋತ್ಸವ ಧಾರ್ಮಿಕತೆ ಜತೆಗೆ ಸಾಂಸ್ಕೃತಿಕ ಉತ್ಸವವಾಗಿ ರೂಪಗೊಂಡಿದೆ. ಅಲ್ಲದೆ ಭಾವೈಕ್ಯತೆಗೆ ಈ ಜಾತ್ರೆ ಹೆಸರುವಾಸಿಯಾಗಿದೆ.

ವಿವಿಧ ಕಾರ್ಯಕ್ರಮಗಳು: ೧೧ರಂದು ಬೆಳಗ್ಗೆ ದೇವರ ರುದ್ರಭಿಷೇಕ ಪೂಜೆ ಮಹಾಮಂಗಳಾರತಿ, ರಥಕ್ಕೆ ಕಳಸಾರೋಹಣ ಹಾಗೂ ಸಂಜೆ ಭಜನೆ ಪಲ್ಲಕ್ಕಿ ಉತ್ಸವ. ೧೨ರಂದು ಬೆಳಗ್ಗೆ ೬ರಿಂದ ಚಿಟಗುಪ್ಪದ ಶ್ರೀ ಗುರುಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ದೇವರಿಗೆ ವಿಶೇಷ ಪೂಜೆ. ನಂತರ ಗುರುಗಳಿಂದ ವೇದಗೋಷಣೆಗಳೊಂದಿಗೆ ಅಗ್ನಿ ಪೂಜೆ ನೆರವೇರುವುದು. ದನಗಳ ಪ್ರದರ್ಶನ ಹಾಗೂ ಸಂಜೆ ಪಲ್ಲಕ್ಕಿ ಉತ್ಸವ, ರಾತ್ರಿ ಶಿವಾನುಭವಗೋಷ್ಠಿ, ಸಂಗೀತ ದರ್ಬಾರ ಕಾರ್ಯಕ್ರಮ ಜರುಗುವವು. ೧೩ರಂದು ಬೆಳಗ್ಗೆ ಅಗ್ನಿ ಪ್ರವೇಶ (ಅಗ್ಗಿ ತುಳಿಯುವುದು), ಸಂಜೆ ರಥೋತ್ಸವ ನೆರವೇರಲಿದೆ. ೧೪ರಂದು ಬೆಳಗ್ಗೆ ೯ ರಿಂದ ೧೨ರ ವರೆಗೆ ಜಂಗಿ ಕುಸ್ತಿ ನಡೆಯಲಿವೆ. ೧೫ರಂದು ಸಂಜೆ ದೇವರ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ.

ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಎಲ್ಲ ಅಧಿಕಾರಿಗಳಿಗೆ ಸೂಚಿಸಿದ್ದು, ಸೂಕ್ತ ಬಂದೋಬಸ್ತ್ ಸೇರಿ ಭಕ್ತರಿಗೆ ಮೂಲ ಸೌಕರ್ಯ ವ್ಯವಸ್ಥೆ ಮಾಡಲಾಗುವುದು. ಭಕ್ತರು ಸಹ ಶಾಂತಿಯಿಂದ ದೇವರ ದರ್ಶನ ಪಡೆದು ಪುನೀತರಾಗಬೇಕು.

| ಡಾ. ಶೈಲೇಂದ್ರ ಬೆಲ್ದಾಳೆ ಶಾಸಕ, ಬೀದರ್ ದಕ್ಷಿಣ ಕ್ಷೇತ್ರ

ಜಾತ್ರೋತ್ಸವಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಭಕ್ತರಿಗೆ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆಗೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಭಕ್ತರು ಶಾಂತ ರೀತಿಯಿಂದ ದೇವರ ದರ್ಶನ ಪಡೆದುಕೊಳ್ಳಬೇಕು. ಸ್ವಚ್ಚತೆಗೆ ಎಲ್ಲರೂ ಆದ್ಯತೆ ನೀಡಬೇಕು.

| ಮುಕುಲ್ ಜೈನ್ ಸಹಾಯಕ ಆಯುಕ್ತ ಬಸವಕಲ್ಯಾಣ ಹಾಗೂ ದೇವಸ್ಥಾನ ಆಡಳಿತಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net