

ಚಾಮರಾಜನಗರ: ರಾಜ್ಯದ ಏಕೈಕ ‘ಕೋವಿಡ್-19 ಮುಕ್ತ ಜಿಲ್ಲೆ’ ಚಾಮರಾಜನಗರಕ್ಕೆ ಈ ಹೆಗ್ಗಳಿಕೆಯೇ ಮುಳುವಾದಂತೆ ಕಾಣುತ್ತಿದೆ. ದೇಶಕ್ಕೆ ಕಂಟಕವಾಗಿರುವ ಮಹಾರಾಷ್ಟ್ರದಲ್ಲಿ ಉಲ್ಬಣಗೊಳ್ಳುತ್ತಿರುವ ಕರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಸುರಕ್ಷಿತ ಎಂಬ ಕಾರಣಕ್ಕೆ ಹಸಿರು ವಲಯವಾದ ಗಡಿಜಿಲ್ಲೆಗೆ ಬಂದ ಮೂವರಲ್ಲಿ ಒಬ್ಬನಿಗೆ ಸೋಂಕು ದೃಢಪಟ್ಟಿದೆ.
ಮುಂಬೈನ ಘಾಟ್ಕೋಪರ್‌ನಿಂದ ಹನೂರು ತಾಲೂಕಿನ ಮಾರ್ಟಳ್ಳಿ ಬಳಿಯ ಪಾಲಿಮೇಡು ಗ್ರಾಮದ ತವರು ಮನೆಗೆ ಬಂದಿದ್ದ ಮಹಿಳೆ ಮತ್ತು ಇಬ್ಬರು ಮಕ್ಕಳಲ್ಲಿ 22 ವರ್ಷ ವಯಸ್ಸಿನ ಕಿರಿಯ ಮಗ ಮೆಡಿಕಲ್ ವಿದ್ಯಾರ್ಥಿಗೆ ಕರೊನಾ ತಗುಲಿದೆ. ತಾಯಿ (45 ವರ್ಷ) ಮತ್ತು ಹಿರಿಯ ಮಗನ (24 ವರ್ಷ) ವರದಿಗಳು ನೆಗೆಟಿವ್ ಬಂದಿವೆ.
ಘಾಟ್ಕೋಪರ್‌ನಿಂದ ಬೆಂಗಳೂರಿಗೆ ರೈಲಿನಲ್ಲಿ ಬಂದಿದ್ದ ಈ ಕುಟುಂಬವನ್ನು ಹನೂರು ತಾಲೂಕಿನ ಸುಳವಾಡಿಯಲ್ಲಿ ವಾಸವಿರುವ ಮಹಿಳೆಯ ಅಣ್ಣ ಕಾರಿನಲ್ಲಿ ಪಾಲಿಮೇಡು ಗ್ರಾಮಕ್ಕೆ ಕರೆತಂದಿದ್ದರು. ಹೀಗಾಗಿ ಇವರು (ಪ್ರಾಥಮಿಕ ಸಂಪರ್ಕ) ಮತ್ತು ಇವರ ಹೆಂಡತಿ, ಇಬ್ಬರು ಮಕ್ಕಳನ್ನು(ದ್ವಿತೀಯ ಸಂಪರ್ಕ) ಕ್ವಾರಂಟೈನ್‌ಗೊಳಪಡಿಸಿ 5 ಮತ್ತು 7ನೇ ದಿನಕ್ಕೆ ಕರೊನಾ ಪರೀಕ್ಷೆಗೊಳಪಡಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ.
ಸೇಫ್ ಎಂಬ ಕಾರಣಕ್ಕೆ ಬಂದರು: ಮೂಲತಃ ಮುಂಬೈನ್‌ನ ಘಾಟ್ಕೋಪರ್ ನಿವಾಸಿಗಳಾದ ಸೋಂಕಿತನ ಕುಟುಂಬ ಪ್ರಸ್ತುತ ರಾಜ್ಯದಲ್ಲಿ ಚಾಮರಾಜನಗರ ಕರೊನಾ ಮುಕ್ತ ಜಿಲ್ಲೆ ಎಂಬ ಕಾರಣಕ್ಕೆ ಇಲ್ಲಿಗೆ ಆಗಮಿಸಿದೆ.
ತಾಯಿಗೆ ಡಯಾಬಿಟಿಸ್ ಇದ್ದಿದ್ದರಿಂದ ಘಾಟ್ಕೋಪರ್ ಸುರಕ್ಷಿತವಲ್ಲ ಎಂದು ನಿರ್ಧರಿಸಿದ್ದ ಇಬ್ಬರು ಮಕ್ಕಳು, ತಾಯಿಯ ತವರು ಮನೆ ಪಾಲಿಮೇಡು ಗ್ರಾಮಕ್ಕೆ ಕರೆತಂದು ಬಿಡಲು ಬಂದಿದ್ದಾರೆ. ಈ ಕುಟುಂಬ ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳದೆ ಕಳೆದ ಗುರುವಾರ ಬೆಂಗಳೂರಿಗೆ ರೈಲಿನಲ್ಲಿ ಆಗಮಿಸಿ ಶುಕ್ರವಾರ ಹನೂರು ತಾಲೂಕಿನ ಸುಳವಾಡಿಯಲ್ಲಿ ವಾಸವಿದ್ದ ಸೋದರ ಮಾವನ ನೆರವಿನೊಂದಿಗೆ ಕಾರಿನಲ್ಲಿ ಪಾಲಿಮೇಡು ಗ್ರಾಮ ತಲುಪಿದ್ದಾರೆ.
ಮರುದಿನ ಬೆಳಗ್ಗೆ ಸೋದರ ಮಾವನ ಅಣತಿಯಂತೆ ಈ ಕುಟುಂಬ ಕೊಳ್ಳೇಗಾಲದ ಫೀವರ್ ಕ್ಲಿನಿಕ್‌ಗೆ ಹೋಗಿ ತಪಾಸಣೆ ಮಾಡಿಸಿಕೊಂಡಿದೆ. ಮುಂಬೈನಿಂದ ಬಂದವರೆಂಬ ಕಾರಣಕ್ಕೆ ಆರೋಗ್ಯ ಇಲಾಖೆ ತಕ್ಷಣ ಇವರನ್ನು ಹನೂರಿನ ಮುರಾರ್ಜಿ ದೇಸಾಯಿ ಕಾಲೇಜಿನಲ್ಲಿ ತೆರೆದಿದ್ದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಿ ನಿಗಾವಹಿಸಿದೆ.
45 ವರ್ಷದ ತಾಯಿಯನ್ನು ಕರೊನಾ ಪರೀಕ್ಷೆಗೊಳಪಡಿಸಿದಾಗ ನೆಗೆಟಿವ್ ವರದಿ ಬಂದಿದೆ. ಆದರೆ ಈ ವೇಳೆಗೆ 22 ವರ್ಷದ ಕಿರಿಯ ಮಗನಿಗೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆ ತಕ್ಷಣ ಈತನ ಅಣ್ಣನೊಂದಿಗೆ ಇಬ್ಬರನ್ನೂ ಜಿಲ್ಲಾಸ್ಪತ್ರೆಯ ಕೋವಿಡ್-19 ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸೋಮವಾರ ಇಬ್ಬರಲ್ಲಿ 24 ವರ್ಷದ ಹಿರಿಯ ಮಗನ ವರದಿ ನೆಗೆಟಿವ್ ಬಂದರೆ, ಕಿರಿಯ ಮಗ ಮೆಡಿಕಲ್ ವಿದ್ಯಾರ್ಥಿಯ ಫಲಿತಾಂಶ ಪಾಸಿಟಿವ್ ಬಂದಿದೆ.
ಜಿಲ್ಲೆ ಹಸಿರು ವಲಯದಲ್ಲೇ ಉಳಿದಿದೆ: ಜಿಲ್ಲೆಯಲ್ಲಿ ಕರೊನಾ ದೃಢಪಟ್ಟಿರುವ ಮುಂಬೈನ ವೈದ್ಯಕೀಯ ವಿದ್ಯಾರ್ಥಿ ಮೂಲತಃ ಘಾಟ್ಕೋಪರ್ ನಿವಾಸಿಯಾಗಿದ್ದು, ಜಿಲ್ಲೆಯವನಲ್ಲ. ಹೆಲ್ತ್ ಬುಲೆಟಿನ್‌ನಲ್ಲಿ ಈತ ಹೊರ ರಾಜ್ಯದ ಇತರ ವರ್ಗದ ಪಟ್ಟಿಗೆ ಸೇರಿಕೊಳ್ಳುತ್ತಾನೆ. ಹೀಗಾಗಿ ಗಡಿಜಿಲ್ಲೆ ಚಾಮರಾಜನಗರ ಈಗಲೂ ಹಸಿರು ವಲಯದಲ್ಲೇ ಉಳಿದಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ.
ಘಾಟ್ಕೋಪರ್‌ನಲ್ಲಿ ಹುಟ್ಟಿ ಬೆಳೆದ ಸೋಂಕಿತ ಕರೊನಾಗೆ ಹೆದರಿ ಪಾಲಿಮೇಡು ಗ್ರಾಮಕ್ಕೆ ಸೋದರ ಮಾವನ ನೆರವಿನೊಂದಿಗೆ ತನ್ನ ಅಣ್ಣನೊಂದಿಗೆ ತಾಯಿಯನ್ನು ಬಿಟ್ಟು ಹೋಗಲು ಬಂದಿದ್ದ. ಇವನಿಗೆ ಕರೊನಾ ದೃಢಪಟ್ಟಿರುವ ಹಿನ್ನೆಲೆ ಜಿಲ್ಲಾಸ್ಪತ್ರೆಯ ಕೋವಿಡ್-19 ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಕರೊನಾದಿಂದ ಗುಣಮುಖರಾಗುತ್ತಿದ್ದಾರೆ ಎಂದು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅನ್‌ಲಾಕ್-1 ಹಂತದಲ್ಲಿ ಹೊರರಾಜ್ಯದ ವ್ಯಕ್ತಿಗೆ ಜಿಲ್ಲೆಯಲ್ಲಿ ಕರೊನಾ ದೃಢಪಟ್ಟಿದೆ. ಜಿಲ್ಲೆಗೆ ಆಗಮಿಸಲು ಸೇವಾ ಸಿಂಧು ಪೋರ್ಟಲ್‌ನಲ್ಲಿ ಕೋರಿರುವ ಮಹಾರಾಷ್ಟ್ರದ 64, ತಮಿಳುನಾಡಿನಿಂದ 385 ಜನರು ಇಂದಿಗೂ ನಾವು ಅನುಮತಿ ನೀಡಿಲ್ಲ. ಚಾಮರಾಜನಗರಕ್ಕೆ ಹೊರರಾಜ್ಯಗಳಿಂದ ಬರಲು 994 ಜನರು ಅರ್ಜಿ ಹಾಕಿದ್ದಾರೆ. ಮೇ 31ರವರೆಗೆ 511 ಜನರಿಗೆ ಅನುಮತಿ ನೀಡಿದ್ದೇವೆ. ಇವರಲ್ಲಿ ಇನ್ನೂರು ಜನರು ಮಾತ್ರ ಜಿಲ್ಲೆಗೆ ಬಂದಿದ್ದಾರೆ. ಆದರೆ ಪಾಸ್ ಇಲ್ಲದೆ 280 ಜನರು ಬಂದಿದ್ದಾರೆ. ಇದೇ ರೀತಿ ನೋಂದಣಿ ಮಾಡಿಸದೆ ಪಾಲಿಮೇಡು ಗ್ರಾಮಕ್ಕೆ ತಾಯಿ ಮತ್ತು ಮಕ್ಕಳು ಆಗಮಿಸಿದ್ದಾರೆ. ಇವರು ರಾಜ್ಯಕ್ಕೆ ಬಂದಾಗ ತಾವು ಯಾವ ಜಲ್ಲೆಗೆ ತೆರಳುತ್ತಿದ್ದೇವೆ ಎಂದು ಮಾಹಿತಿಯನ್ನೂ ನೀಡಿಲ್ಲ. ನಂತರ ಫೀವರ್ ಕ್ಲಿನಿಕ್‌ಗೆ ಬಂದಾಗಲೇ ವಿಷಯ ತಿಳಿದು ಬಂದಿದೆ ಎಂದರು.
ತಮಿಳುನಾಡಿನ 58, ಜಾರ್ಖಂಡ್, ಉತ್ತರಾಖಂಡದಿಂದ ಬಂದಿರುವ 6 ಜನರನ್ನು ಪ್ರಸ್ತುತ ಕ್ವಾರಂಟೈನ್‌ನಲ್ಲಿರಿಸಿ ನಿಗಾ ವಹಿಸಲಾಗಿದೆ. ಈವರೆಗೆ ಜಿಲ್ಲೆಗೆ ಮಹಾರಾಷ್ಟ್ರದಿಂದ 17 ಜನರಲ್ಲಿ 11 ಜನ ಕ್ವಾರಂಟೈನ್ ಮುಗಿಸಿದ್ದಾರೆ. ಉಳಿದ 6 ಜನರ ನಿಗಾವಣೆ ಮುಂದುವರಿದಿದೆ. ಸದ್ಯ ಸೋಂಕು ದೃಢಪಟಿರುವ ವ್ಯಕ್ತಿಯ ಸೋದರಮಾವ ಮತ್ತು ಆತನ ಕುಟುಂಬವನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಡಾ.ಎಂ.ಆರ್.ರವಿ, ಜಿಲ್ಲಾಧಿಕಾರಿ, ಚಾಮರಾಜನಗರ
ಇಲ್ಲಿ ಅವರನ್ನು ಕ್ವಾರಂಟೈನ್ ಮಾಡಿ ಹುಷಾರು ಮಾಡಿಕೊಳುಹಿಸಿಕೊಡುತ್ತೇವೆ. ರಾಜ್ಯದಲಿ ಇಂತಹ 34 ಕೇಸ್(ಇತೆರೆ) ಕೇಸ್‌ಗಳಲ್ಲಿ ಅವರು ಬರುತ್ತಾರೆ. ಆ ಕಾರಣಕ್ಕೆ ನಮ್ಮ ಜಿಲ್ಲೆ ಹಸಿರು ಜಿಲ್ಲೆಯಾಗಿಯೇ ಉಳಿದುಕೊಂಡಿದೆ.