

ಚಾಮರಾಜನಗರ: ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸುಮಾರು ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಹೆಜ್ಜಾಲ-ಚಾಮರಾಜನಗರ ರೈಲುಮಾರ್ಗಕ್ಕೆ ಮರುಜೀವ ಬೇಕಿದೆ.
ಬೆಂಗಳೂರು-ಕನಕಪುರ-ಚಾಮರಾಜನಗರ ಹಾಗೂ ತಮಿಳುನಾಡಿನ ಸತ್ಯಮಂಗಲ ಮಾರ್ಗವಾಗಿ ರೈಲುಮಾರ್ಗವನ್ನು ನಿರ್ಮಾಣ ಮಾಡಬೇಕು ಎಂದು 1997-98 ರಲ್ಲಿ ಅನುಮತಿ ದೊರೆತಿತ್ತು. ಆದರೆ ಚಾಮರಾಜನಗರದಿಂದ ಸತ್ಯಮಂಗಲದ ವರೆಗೆ ಮೀಸಲು ಅರಣ್ಯ ಪ್ರದೇಶ ಇರುವುದರಿಂದ ಭೂ ಸ್ವಾಧೀನ ಪ್ರಕ್ರಿಯೆಗೆ ಅಡ್ಡಿಯಾಗಿ ಚಾಮರಾಜನಗರ-ಸತ್ಯಮಂಗಲ ರೈಲು ಮಾರ್ಗದ ಯೋಜನೆ ನನೆಗುದಿಗೆ ಬಿದ್ದಿತ್ತು. ಬಳಿಕ ಚಾಮರಾಜನಗರ-ಹೆಜ್ಜಾಲ ರೈಲು ಮಾರ್ಗ ಮುನ್ನೆಲೆಗೆ ಬಂದಿತು. ಈ ರೈಲುಮಾರ್ಗ ನಿರ್ಮಾಣದ ಭೂಸ್ವಾಧೀನಕ್ಕೆ 2016 ರಲ್ಲಿ ರೈಲ್ವೆ ಇಲಾಖೆ ಕೇಂದ್ರಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಆದರೇ ಒಂದಿಲ್ಲೊಂದು ಕಾರಣಗಳಿಂದ ಉದ್ದೇಶಿತ ಈ ರೈಲುಮಾರ್ಗ ನಿರ್ಮಾಣ ನೆನೆಗುದಿಗೆ ಬೀಳುತ್ತಲೇ ಇರುವುದು ವಿಪರ್ಯಾಸವಾಗಿದೆ.
ಸುಮಾರು 142 ಕಿ.ಮೀ ಉದ್ದದ ರೈಲು ಮಾರ್ಗಕ್ಕೆ ಸುಮಾರು 1700 ಎಕರೆಗಿಂತಲೂ ಅಧಿಕ ಖಾಸಗಿ ಭೂಮಿ ಅಗತ್ಯವಿದ್ದು, ಈಗಿನ ಅಂದಾಜು ಭೂ ಸ್ವಾಧೀನ ಮೊತ್ತವೇ 1500 ಕೋಟಿ ರೂ, ಗಳಿಗೂ ಹೆಚ್ಚಿದೆ. ಈ ಯೋಜನೆ ನಿರ್ಮಾಣದ ಜವಾಬ್ದಾರಿ ಹೆಚ್ಚಾಗಿ ಕೇಂದ್ರ ಸರ್ಕಾರದ ಮೇಲಿದ್ದರೂ, ಭೂಮಿ ಒದಗಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿದೆ. ಇತ್ತೀಚಿಗೆ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಯೋಜನೆಯ ಕುರಿತು ಇದೇ ವಿಚಾರವನ್ನು ಪ್ರಸ್ತಾಪ ಮಾಡಿದ್ದರು. ಅದರಂತೆ ಸಾರ್ವಜನಿಕರಿಂದ ಈ ವಾರದ ಲೌಡ್‌ಸ್ಪೀಕರ್‌ನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.
ಜಿಲ್ಲೆ ಸಮಗ್ರ ಅಭಿವೃದ್ಧಿಯಾಗಲಿದೆ
ಕೇಂದ್ರದ ಯೋಜನೆಗಳಿಗೆ ಭೂಸ್ವಾಧೀನ ಮಾಡಿಕೊಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಡನಾಟ ರಾಜ್ಯದ ಅಭಿವೃದ್ಧಿಯ ದೃಷ್ಟಿಯಲ್ಲಿ ಉತ್ತಮವಾಗಿದ್ದು, ಚಾ.ನಗರ-ಹೆಜ್ಜಾಲ ರೈಲು ಮಾರ್ಗಕ್ಕೆ ಚಾಲನೆ ದೊರೆಯಲಿದೆ ಎಂಬ ವಿಶ್ವಾಸವಿದೆ. ಈ ಯೋಜನೆಯಾದರೆ ಬೆಂಗಳೂರಿನ ಪ್ರಯಾಣದ ವೇಳೆ ಕಡಿಮೆಯಾಗಲಿದೆ. ಜಿಲ್ಲೆಯ ವ್ಯಾಪಾರ-ವಹಿವಾಟಿಗೆ ಉತ್ತಮ ವೇಗ ದೊರೆಯಲಿದೆ. ಕೈಗಾರಿಕೆ ಮತ್ತು ಇನ್ನಿತರೆ ಕ್ಷೇತ್ರಗಳು ಸಮಗ್ರ ಅಭಿವೃದ್ಧಿಯಾಗಲಿದೆ. ವಿ.ಸೋಮಣ್ಣ ಅವರಿಗೆ ಯೋಜನೆ ಜಾರಿಗೊಳಿಸುವ ಇಚ್ಛಾಶಕ್ತಿ ಇದೆ.
ಎ.ಜಯಸಿಂಹ, ಅಧ್ಯಕ್ಷ, ಜಿಲ್ಲಾ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಂಘ, ಚಾಮರಾಜನಗರ
ನಿರಂತರ ಒತ್ತಡ ತರಲಾಗಿದೆ
ಚಾಮರಾಜನಗರ-ಹೆಜ್ಜಾಲ ರೈಲು ಮಾರ್ಗವನ್ನು ಆದಷ್ಟು ಬೇಗ ಮಂಜೂರು ಮಾಡಬೇಕು ಎಂದು ಕೇಂದ್ರ ರೈಲ್ವೆ ವಿಭಾಗೀಯ ಕಚೇರಿಗೆ ಈಗಾಗಲೇ ಪತ್ರವನ್ನು ಬರೆದಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರಂತರವಾಗಿ ಯೋಜನೆ ಸಂಬಂಧ ಒತ್ತಡ ತರಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡುತ್ತೇವೆ. ಚಾಮರಾಜನಗರ-ಹೆಜ್ಜಾಲ ಮತ್ತು ಚಾಮರಾಜನಗರ-ಬಣ್ಣಾರಿ-ಮೆಟ್ಟುಪಾಳ್ಯಂ ರೈಲು ಯೋಜನೆಯನ್ನು ಜಾರಿಗೊಳಿಸಿದರೆ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯಲಿದೆ.
ವಿ.ಪ್ರಭಾಕರ್, ಸದಸ್ಯ, ಡಿಆರ್‌ಯುಸಿ ರೈಲ್ವೆ ಸಮಿತಿ, ಮೈಸೂರು
ಆರ್ಥಿಕ ವೆಚ್ಚ ತಗ್ಗಲಿದೆ
ಚಾಮರಾಜನಗರ-ಹೆಜ್ಜಾಲ ರೈಲು ಮಾರ್ಗ ಅನುಷ್ಠಾನಕ್ಕೆ ಬಂದರೆ ತಮಿಳುನಾಡು ಹಾಗೂ ಕರ್ನಾಟಕ ವ್ಯಾಪಾರೋದ್ಯಮ ಅಭಿವೃದ್ಧಿಗೊಳ್ಳುತ್ತದೆ. ಜಿಲ್ಲೆಯ ಕೃಷಿ, ಕೈಗಾರಿಕೆಗೆ ಸಹಕಾರಿಯಾಗಲಿದೆ. ಜನ ಸಾಮಾನ್ಯರ ಆರ್ಥಿಕ ವೆಚ್ಚವು ತಗ್ಗಲಿದೆ. ಗಡಿ ಜಿಲ್ಲೆ ಅಭಿವೃದ್ಧಿಗೆ ಈ ಯೋಜನೆ ಪೂರಕವಾಗಲಿದೆ. ಆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಚಾ.ನಗರ-ಹೆಜ್ಜಾಲ ರೈಲು ಮಾರ್ಗಕ್ಕೆ ಆಧ್ಯತೆ ನೀಡಬೇಕಿದೆ. ಈ ಸಂಬಂಧ ಕೇಂದ್ರ ರೈಲ್ವೆ ರಾಜ್ಯಸಚಿವ ವಿ.ಸೋಂರ್ನಣ ಅವರಿಗೆ ಮನವಿ ಸಲ್ಲಿಸಲಾಗಿದೆ.
ಎಸ್.ದತ್ತೇಶ್‌ಕುಮಾರ್, ಕಾರ್ಯದರ್ಶಿ, ಮಾನಸ ಶಿಕ್ಷಣ ಸಂಸ್ಥೆ, ಕೊಳ್ಳೇಗಾಲ
ಆಶಾದಾಯಕ ಬೆಳವಣಿಗೆ
ಚಾಮರಾಜನಗರ-ಹೆಜ್ಜಾಲ ರೈಲ್ವೆ ಯೋಜನೆ ಮಾಜಿ ಸಂಸದ ದಿವಂಗತ ಆರ್.ಧ್ರುವನಾರಾಯಣ್ ಅವರ ಕನಸಾಗಿತ್ತು. ಆದರೆ ಕೆಲ ಕಾರಣಾಂತರದಿಂದ ನೆನೆಗುದಿಗೆ ಬಿದ್ದಿದೆ. ಇದೀಗ ಯೋಜನೆಯನ್ನು ಕೈಗೆತ್ತಿಕೊಳ್ಳುವುದಾಗಿ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಈ ಯೋಜನೆ ಜಾರಿಯಾದರೆ ಹನೂರು ಭಾಗದ ಜನರಿಗೂ ಅನುಕೂಲವಾಗಲಿದೆ. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಮುತುವರ್ಜಿ ವಹಿಸಿ ಯೋಜನೆಯನ್ನು ಶೀಘ್ರ ಜಾರಿಗೊಳಿಸಬೇಕು.
ಸಿದ್ದರಾಜು, ನಿವಾಸಿ, ಹನೂರು
ಯೋಜನೆ ಬೇಗ ಅನುಷ್ಠಾನವಾಗಲಿ
ಹನೂರು ತಾಲೂಕಿನ ಜನರು ಕೆಲಸ ಕಾರ್ಯಗಳ ನಿಮಿತ್ತ ಹಾಗೂ ವ್ಯಾಪಾರ ವ್ಯವಹಾರಕ್ಕಾಗಿ ಬೆಂಗಳೂರಿಗೆ ತೆರಳುತ್ತಿದ್ದಾರೆ. ಆದರೆ ರೈಲ್ವೆ ಯೋಜನೆ ಇಲ್ಲದ ಪರಿಣಾಮವಾಗಿ ಕೊಳ್ಳೇಗಾಲದಿಂದ ಬಸ್ ಮೂಲಕ ಬೆಂಗಳೂರಿಗೆ ಪ್ರಯಾಣಿಸಬೇಕಿದೆ. ಚಾಮರಾಜನಗರ-ಹೆಜ್ಜಾಲ ರೈಲ್ವೆ ಯೋಜನೆ ಜಾರಿಯಾದರೆ ಹನೂರು ಭಾಗದ ಜನರು ಅದರಲ್ಲೂ ಬಡವರು ಕೊಳ್ಳೇಗಾಲದಿಂದ ಬೆಂಗಳೂರಿಗೆ ತೆರಳಲು ಹೆಚ್ಚು ಅನುಕೂಲವಾಗಲಿದೆ. ಆದ್ದರಿಂದ ಯೋಜನೆ ಬೇಗ ಅನುಷ್ಠಾನವಾಗಬೇಕು.
ವೆಂಕಟೇಶ್, ಚನ್ನಾಲಿಂಗನಹಳ್ಳಿ, ಹನೂರು
ಕನಸು ನನಸಾಗಲಿ
ಚಾಮರಜನಗರ-ಹೆಜ್ಜಾಲ ರೈಲ್ವೆ ಮಾರ್ಗದ ಕನಸು ನನಸಾಗುವ ಕಾಲ ಸನ್ನಿಹಿತವಾಗುತ್ತದೆ ಎಂದು ಈ ಭಾಗದ ಜನರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಬಹು ದಶಕಗಳ ಕನಸು ಇದಾಗಿದೆ. ಈ ಮಾರ್ಗ ಪೂರ್ಣಗೊಂಡರೆ ಮೈಸೂರು, ಬೆಂಗಳೂರಿನ ರೈಲ್ವೆಯ ಒತ್ತಡ ಕಡಿಮೆಯಾಗುತ್ತದೆ. ಅಲ್ಲದೆ ಕನಕಪುರ, ಮಳವಳ್ಳಿ, ಕೊಳ್ಳೇಗಾಲ, ಚಾಮರಾಜನಗರದ ಆರ್ಥಿಕ ಚಟುವಟಿಕೆಗಳ ಬೆಳವಣಿಗೆಗೂ ಇದು ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕಾಮಗಾರಿ ಆರಂಭಗೊಳ್ಳಲು ಆದಷ್ಟು ಬೇಗ ಕ್ರಮ ವಹಿಸಬೇಕು.
ಪ್ರತೀಪ್ ಕುಮಾರ್, ಬಿಳಿಗಿರಿರಂಗನಬೆಟ್ಟ, ಯಳಂದೂರು
ಪ್ರವಾಸಿ ತಾಣಗಳ ಅಭಿವೃದ್ಧಿ
ಜಿಲ್ಲೆಯ ಜನತೆಯ ಹಲವು ವರ್ಷಗಳ ಬೇಡಿಕೆಯಾದ ಚಾಮರಾಜನಗರ-ಹೆಜ್ಜಾಲ ರೈಲು ಮಾರ್ಗ ಯೋಜನೆ ಜಾರಿಯಾಗಬೇಕು. ಇದರಿಂದ ಹಿಂದುಳಿದ ಜಿಲ್ಲೆ ಎಂದು ಕರೆಯಲ್ಪಡುವ ಜಿಲ್ಲೆಯ ಅಭಿವೃದ್ಧಿ ಸಾಧ್ಯವಿದೆ. ಆದ್ದರಿಂದ ರೈಲು ಸಂಪರ್ಕದ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿಕೊಡಬೇಕು. ವಿಶೇಷವಾಗಿ ವಿದ್ಯಾರ್ಥಿಗಳು ಪ್ರವಾಸಿಗರಿಗೆ ಅನುಕೂಲಕವಾಗಲಿದೆ. ಚಾಮರಾಜನಗರದ ಸುತ್ತ ಮುತ್ತಲಿನ ಪ್ರವಾಸಿ ತಾಣಗಳ ಪೂರಕ ವಾಗಲಿದೆ.
ಅರುಣ ಕಾರ್ತಿಕ್, ಅಧ್ಯಕ್ಷೆ, ಅಕ್ಕನ ಬಳಗ, ಕೊಳ್ಳೇಗಾಲ
ಜಿಲ್ಲೆಯ ಜನರಿಗೆ ಅನುಕೂಲ
ಹಿಂದೆ ಬೆಂಗಳೂರು-ಸತ್ಯಮಂಗಲ ರೈಲ್ವೆ ಮಾರ್ಗಕ್ಕೆ ಗುರುತು ಮಾಡಿದ್ದ ಮಾರ್ಗದಲ್ಲಿ ಅರಣ್ಯ ಪ್ರದೇಶವಿದ್ದು, ಯೋಜನೆ ನೆನೆಗುದಿಗೆ ಬಿದ್ದಿದೆ. ಸದ್ಯ ಚಾಮರಾಜನಗರ-ಹೆಜ್ಜಾಲ ಮಾರ್ಗವಾಗಿ ಗುರುತಿಸಿರುವ ಈ ಯೋಜನೆಯಲ್ಲಿ ರೈಲುಗಳು ಬೆಂಗಳೂರಿನಿಂದ ಕನಕಪುರ, ಮಳವಳ್ಳಿ, ಯಳಂದೂರು ಮಾರ್ಗವಾಗಿ ನೇರವಾಗಿ ಚಾಮರಾಜನಗರಕ್ಕೆ ತಲುಪುವುದರಿಂದ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ.
ಸಂಪತ್ತು, ರೈತ ಮುಖಂಡ, ಕುಂದಕೆರೆ, ಗುಂಡ್ಲುಪೇಟೆ