

ಚಾಮರಾಜನಗರ: ಹೆಜ್ಜಾಲ - ಚಾಮರಾಜನಗರ ಮಾರ್ಗದ ನೂತನ ರೈಲು ಮಾರ್ಗ ನಿರ್ಮಾಣ ಒತ್ತಾಯಿಸಿ ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಬುಧವಾರ ಸಂಸದ ಸುನೀಲ್ ಬೋಸ್ ಮನವಿ ಸಲ್ಲಿಸಿದರು.
ನವದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿದ ಸಂಸದ ಸುನೀಲ್ ಬೋಸ್ ಅವರು, ಬಹುನಿರೀಕ್ಷಿತ ಹೆಜ್ಜಾಲ-ಚಾಮರಾಜನಗರ ರೈಲು ಮಾರ್ಗ ನಿರ್ಮಾಣವನ್ನು ತ್ವರಿತವಾಗಿ ಮಂಜೂರು ಮಾಡುವಂತೆ ಮನವಿ ಮಾಡಿದರು. ಈ ಹಿಂದೆ ಬೆಂಗಳೂರಿನಿಂದ ಸತ್ಯಮಂಗಲದ ವರೆಗೆ (ಒಟ್ಟು 260 ಕಿಮೀ) ಪ್ರಸ್ತಾಪಗೊಂಡಿದ್ದ ಈ ಮಾರ್ಗವು ಮುಂದೆ ತಮಿಳುನಾಡು ಸರ್ಕಾರವು ಸತ್ಯ ಮಂಗಲ ಪ್ರದೇಶದಲ್ಲಿ ಸರ್ವೇ ಮಾಡಲು ಅವಕಾಶ ನೀಡದ ಕಾರಣ 2013-14 ರಲ್ಲಿ ಕೆಂಗೇರಿಯಿಂದ ಚಾಮರಾಜನಗರಕ್ಕೆ ರೈಲು ಮಾರ್ಗವನ್ನು ಗುರುತಿಸಲಾಗಿತ್ತು.
ಆದರೆ ಈ ಸರ್ವೇ ಮಾರ್ಗದಲ್ಲಿ ಅರಣ್ಯ ಪ್ರದೇಶ ಬಂದ ಕಾರಣ ಇದೀಗ ಸರ್ವೇ ಮಾರ್ಗವನ್ನು ಹೆಜ್ಜಾಲದಿಂದ ಗುರುತಿಸಲಾಗಿದ್ದು ಈ ರೈಲು ಮಾರ್ಗ ಕನಕಪುರ - ಮಳವಳ್ಳಿ - ಯಳಂದೂರು ಮಾರ್ಗವಾಗಿ ಚಾಮರಾಜನಗರ ತಲುಪಲಿದೆ. ಇದೊಂದು ಬಹು ನಿರೀಕ್ಷಿತ ಯೋಜನೆ ಆಗಿದ್ದು ಇದರಿಂದ ಬಹಳಷ್ಟು ಜನರಿಗೆ ಅನುಕೂಲ ಆಗಲಿದೆ ಎಂದು ಮನವಿ ಪತ್ರದಲ್ಲಿ ವಿವರಿಸಿದ್ದಾರೆ.