

ಚಾಮರಾಜನಗರ: ಚಾಮರಾಜನಗರ ವಿಶ್ವವಿದ್ಯಾನಿಲಯದ ಸುವರ್ಣ ಗಂಗೋತ್ರಿ ಆವರಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಲಾಯಿತು.
ಧ್ವಜಾರೋಹಣ ನೇರವೇರಿಸಿದ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ಆರ್. ಗಂಗಾಧರ್ ಮಾತನಾಡಿ, ಭಾರತ ದೇಶವು ಬ್ರಿಟಿಷರ ಆಳ್ವಿಕೆಯಿಂದ 1947ರ ಆ.15 ರಂದು ಸರ್ವತಂತ್ರ ಸ್ವತಂತ್ರವಾಯಿತು. 200ಕ್ಕೂ ಹೆಚ್ಚು ವರ್ಷಗಳ ಕಾಲ ಬ್ರಿಟೀಷರ ಆಳ್ವಿಕೆಯ ಬಳಿಕ ದೇಶಕ್ಕೆ ಸ್ವಾತಂತ್ರ್ಯ ದೊರಕಿತು. ಈ ದಿನವನ್ನು ಭಾರತದಾದ್ಯಂತ ಸಂಭ್ರಮ, ಸಡಗರ, ಸ್ವಾಭಿಮಾನ ಹಾಗೂ ದೇಶಭಕ್ತಿಯ ಸಂಕೇತವಾಗಿ ಆಚರಿಸಲಾಗುತ್ತದೆ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯ ನಾಯಕರು ಮುಂಚೂಣಿ ವಹಿಸಿದ್ದರು. ಪ್ರಮುಖವಾಗಿ ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್ ಇನ್ನಿತರೆ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಸ್ವಾತಂತ್ರ್ಯಕ್ಕಾಗಿ ಇನ್ನೂ ಅನೇಕ ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿರುವ ಇತಿಹಾಸವೂ ಇದೆ. ಒಟ್ಟಾರೆಯಾಗಿ ಈ ದಿನವು ಭಾರತೀಯರಿಗೆ ಬಹಳ ಮಹತ್ವದ್ದಾಗಿದ್ದು, ಅದರಲ್ಲೂ ಬ್ರಿಟಿಷರಿಂದ ಮುಕ್ತರಾದಂತಹ ದಿನವೆಂದೇ ಹೇಳಬಹುದು ಎಂದು ತಿಳಿಸಿದರು.
ಸ್ವಾತಂತ್ರ್ಯ ದಿನದಂದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಾಮಾಜಿಕ ಸಾಮರಸ್ಯದೆಡೆಗೆ ನಡೆಯಲು ಬಹು ಸಂಸ್ಕೃತಿಯನ್ನು ಎತ್ತಿ ಹಿಡಿಯುವುದರ ಜೊತೆಗೆ ವೈಚಾರಿಕ ಚಿಂತನೆಗಳನ್ನು ಚರ್ಚಿಸಲಾಗುತ್ತದೆ. ಇಂದಿನ ಸ್ಥಿತಿಗತಿಗಳು ಹಾಗೂ ವ್ಯವಸ್ಥೆಗಳ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳು, ಸಾಂಸ್ಕೃತಿಕ ಚಟುವಟಿಕೆಗಳು, ಮಹನೀಯರನ್ನು ನೆನೆಯುವಂತಹ ನಾಟಕಗಳು, ಗೀತೆಗಳು, ಕ್ರೀಡೆಗಳು ಹಾಗೂ ಇನ್ನೂ ಹಲವಾರು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಸಾಹಸ, ಹಗಲಿರುಳು ಶ್ರಮಿಸಿದ ನಡೆಯನ್ನು ಗೌರವಿಸುವ ಕಾರ್ಯದ ಜೊತೆಗೆ ಇಂದಿನ ಯುವ ಸಮೂಹಕ್ಕೆ ಅವರ ಸಾಧನೆಗಳನ್ನು ಅರ್ಥೈಸುವುದರ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ದೇಶದ ಏಕತೆ, ಸಮೃದ್ಧಿ, ಸಹಬಾಳ್ವೆ, ಭ್ರಾತೃತ್ವ ಭಾವನೆ ಮತ್ತು ಪ್ರಗತಿಗಾಗಿ ಪ್ರತಿಯೊಬ್ಬರು ಶ್ರಮಿಸುತ್ತೇವೆಂದು ಪ್ರತಿಜ್ಞೆಯನ್ನು ಮಾಡುತ್ತೇವೆ. ಒಟ್ಟಾರೆಯಾಗಿ ನಾವು ಸ್ವಾತಂತ್ರ್ಯ ದಿನವನ್ನು ಆಚರಿಸುವುದರ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲಾ ವೀರ ಸೇನಾನಿಗಳನ್ನು, ಮಹನೀಯರನ್ನು ಈ ನೆಲದ ಪ್ರತಿಯೊಬ್ಬರು ಗೌರವಯುತವಾಗಿ ಸ್ಮರಿಸುವ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ವಿ.ಜಿ. ವೆಂಕಟರಮಣ, ಹಣಕಾಸು ಅಧಿಕಾರಿ ನಾಗೇಶ್, ರಾ.ಸೇ.ಯೋ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಆರ್. ಮಹೇಶ್, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.