

ಚಾಮರಾಜನಗರ: ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕನ್ನಡ ಭಾಷೆಯಲ್ಲಿ ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಸ್ವದೇಶಿ ವಿಜ್ಞಾನ ಆಂದೋಲನ ಮತ್ತು ಚಾಮರಾಜನಗರ ವಿಶ್ವವಿದ್ಯಾಲಯ ಸಹಯೋಗದಲ್ಲಿ ಡಿ.19, 20 ಮತ್ತು 21 ರಂದು 18ನೇ ಕನ್ನಡ ವಿಜ್ಞಾನ ಸಮ್ಮೇಳನವನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಅವರು ತಿಳಿಸಿದರು.
ನಗರದ ಹೊರ ವಲಯದಲ್ಲಿರುವ ಚಾಮರಾಜನಗರ ವಿಶ್ವವಿದ್ಯಾಲಯದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿರ ಅವರು ಮಾತನಾಡಿದರು. ಸ್ವದೇಶಿ ವಿಜ್ಞಾನ ಆಂದೋಲನ-ಕರ್ನಾಟಕ ವತಿಯಿಂದ ಈ ವರೆಗೆ 17 ಕನ್ನಡ ವಿಜ್ಞಾನ ಸಮ್ಮೇಳನವನ್ನು ಆಯೋಜಿಸಲಾಗಿದೆ. 17ನೇ ವಿಜ್ಞಾನ ಸಮ್ಮೇಳನ ತುಮಕೂರು ವಿಶ್ವವಿದ್ಯಾಲಯದಲ್ಲಿ ಆಯೋಜನೆ ಮಾಡಲಾಗಿತ್ತು. 18ನೇ ಸಮ್ಮೇಳನವನ್ನು ಚಾಮರಾಜನಗರ ವಿಶ್ವವಿದ್ಯಾಲಯದಲ್ಲಿ ಆಯೋಜಿಸುವ ಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ ವಿಜ್ಞಾನದ ಕುರಿತು ಅರಿವು ಮೂಡಿಸಲು ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದರು.
ಈ ಸಮ್ಮೇಳನದಲ್ಲಿ 12 ವಿಭಾಗಗಳ ವಿವಿಧ ವಿಚಾರಗಳಲ್ಲಿ ಪ್ರಬಂಧ ಮಂಡನೆಗೆ ಅವಕಾಶ ನೀಡಲಾಗಿದೆ. ನಿಗದಿತ ಸಮಯದಲ್ಲಿ ಪೂರ್ಣ ಪ್ರಬಂಧವನ್ನು ಸಲ್ಲಿಸಿ ಮೌಖಿಕವಾಗಿ ಪ್ರಸ್ತುತ ಪಡಿಸಿದ ಓರ್ವ ಮಹಿಳಾ ವಿಜ್ಞಾನಿ, ಓರ್ವ ಯುವ ವಿಜ್ಞಾನಿ ಹಾಗೂ ಓರ್ವ ಅತ್ಯುತ್ತಮ ಪ್ರಬಂಧಗಳನ್ನು ಪರಿಗಣಿಸಿ ಬಹುಮಾನ ನೀಡಲಾಗುವುದು. ಎಲ್ಲಾ ಪ್ರಬಂಧ ಸಾರಗಳನ್ನು ಸ್ಮರಣಾ ಸಂಚಿಕೆಯಲ್ಲಿ ಮುದ್ರಿಸಲಾಗುವುದು. ಈ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ಮತ್ತು ವಿದ್ಯಾಥಿಯೇತರರು ಭಾಗವಹಿಸಬಹುದಾಗಿದ್ದು, ಇದದ ಸದುಪಯೋಗಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಸ್ವದೇಶಿ ವಿಜ್ಞಾನ ಆಂದೋಲನದ ಅಧ್ಯಕ್ಷ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ, ಸ್ವದೇಶಿ ವಿಜ್ಞಾನ ಆದೋಲನ-ಕರ್ನಾಟಕವು ವಿಜ್ಞಾನ, ತಂತ್ರಜ್ಞಾನವನ್ನು ಕನ್ನಡ ಭಾಷೆಯಲ್ಲಿ ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿದೆ. ಈ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಿಧ ವೈಜ್ಞಾನಿಕ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆ ನೀಡಿದ ಕನ್ನಡಿಗರಿಗೆ ಡಾ.ಸರ್.ಎಂ.ವಿಶ್ವೇಶ್ವರಯ್ಯ, ಡಾ.ಸಿ.ಎನ್.ಆರ್ ರಾವ್ ಹಾಗೂ ಡಾ.ಭೀಮಸೇನ್ ಜೋಶಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಜಿ.ವಿ.ವೆಂಕಟರಮಣ, ಪಿಎಂಇಬಿ ನಿರ್ದೇಶಕ ಡಾ.ವಿ.ಜಿ.ಸಿದ್ದರಾಜು, ಸ್ವದೇಶಿ ವಿಜ್ಞಾನ ಆಂದೋಲನದ ರಾಜ್ಯ ಕಾರ್ಯದರ್ಶಿ ಎಚ್.ರಮೇಶ್, ಉಪಾಧ್ಯಕ್ಷ ಡಾ.ಎ.ಎಂ.ಸುಧಾಕರ್, ಸದಸ್ಯರಾದ ಚಂದ್ರಕುಮಾರಿ, ವಸಂತ್‌ಕುಮಾರ್, ಮಂಜುನಾಥ್, ವಕೀಲರಾದ ಅರುಣ್ ಕುಮಾರ್ ಹಾಜರಿದ್ದರು.