

ಚಾಮರಾಜನಗರ: ರಾಜ್ಯದಲ್ಲಿ ಮಿತಿ ಮೀರಿರುವ ಮೈಕ್ರೋ ಫೈನಾನ್ಸ್ ಹಾವಳಿಯನ್ನು ಸಂಪೂರ್ಣವಾಗಿ ತಡೆಗಟ್ಟುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಸಹಯೋಗದಲ್ಲಿ ಚಾಮರಾಜನಗರ ರೈತರು ಬೆಂಗಳೂರಿನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಚಾಮರಾಜನಗರದಿಂದ 2 ಬಸ್ ಗಳಲ್ಲಿ ಹಾಗೂ ನೂರಾರು ವಾಹನಗಳಲ್ಲಿ ಬೆಂಗಳೂರಿಗೆ ತೆರಳಿದ್ದ ರೈತರು, ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಮತ್ತು ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಮೈಕ್ರೋ ಫೈನಾನ್ಸ್ ಗಳು ಬಂದಾಗ ಮೊದಲು ಜನರಿಗೆ ಕೆಲವು ಅನುಕೂಲಗಳು ಆಗಿರಬಹುದು. ಆದರೇ ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಗಳ ಹಾವಳಿ ಮಿತಿಮೀರಿದೆ. ಗ್ರಾಮೀಣ ಪ್ರದೇಶದ ಜನರು ಮೈಕ್ರೋ ಫೈನಾನ್ಸ್ ಹಾವಳಿಗೆ ನಿಜವಾಗಿಯೂ ತತ್ತರಿಸಿ ಹೋಗಿದ್ದಾರೆ. ಹಲವೆಡೆ ಕಿರುಕುಳ ತಾಳಲಾರದೇ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕಾಗಿದೆ ಎಂದರು.
ಮೈಕ್ರೋ ಫೈನಾನ್ಸ್ ಗಳು ಆರ್.ಬಿ.ಐ ನಿಯಮಗಳ ಅನುಸಾರವಾಗಿ ನಡೆದುಕೊಳ್ಳುತ್ತಿಲ್ಲ. ನಿಯಮಗಳನ್ನು ಉಲ್ಲಂಘನೆ ಮಾಡಿ ಅಗತ್ಯಕ್ಕಿಂತ ಹೆಚ್ಚಾಗಿ ಜನರಿಗೆ ಸಾಲವನ್ನು ನೀಡಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮಹೇಶ್ ಪ್ರಭು ಮಾತನಾಡಿ, ಮೈಕ್ರೋ ಫೈನಾನ್ಸ್ ಗಳ ಹಾವಳಿಯಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಗ್ರಾಮೀಣ ಭಾಗದ ಜನರು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಗ್ರಾಮೀಣ ಭಾಗದ ಜನರ ನೋವು ಅರ್ಥವಾಗುತ್ತಿಲ್ಲ. ಈಗಲಾದರೂ ಎಚ್ಚೆತ್ತುಕೊಂಡು ಮೈಕ್ರೋ ಫೈನಾನ್ಸ್ ಹಾವಳಿಯಿಂದ ಜನರನ್ನು ರಕ್ಷಣೆ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಸಮಾಜ ಕಲ್ಯಾಣ ಸಚಿವರಾದ ಎಚ್.ಸಿ.ಮಹದೇವಪ್ಪ ಅವರು ಭೇಟಿ ನೀಡಿ ಅಹವಾಲು ಸ್ವೀಕರಿಸಿದರು. ಸರ್ಕಾರ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದಾಗಿ ಭರವಸೆ ನೀಡಿದರು. ಇದೇ ವೇಳೆ ಆರ್.ಬಿ.ಐ ಮತ್ತು ನಬಾರ್ಡ್ ಅಧಿಕಾರಿಗಳನ್ನು ರೈತ ಮುಖಂಡರು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡ ಹೆಗ್ಗವಾಡಿಪುರ ಮಹೇಶ್ ಪ್ರಭು, ಹೆಬ್ಬಸೂರು ಬಸವಣ್ಣ, ಮಹೇಶ್, ಶಿವಪುರ ಮಹದೇವಪ್ಪ, ಜ್ಯೋತಿಗೌಡನಪುರ ಸಿದ್ದರಾಜು ಹಾಗೂ ನೂರಾರು ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು.
ಸಚಿವರ ಮುಂದೆ ವಿದ್ಯಾರ್ಥಿ ಅಳಲು:
ನನಗೆ ಸರ್ಕಾರಿ ಅವಕಾಶ ಮಾಡಿಕೊಡಿ, ನನ್ನ ಕಿಡ್ನಿಯನ್ನು ಮಾರಾಟ ಮಾಡಿ ನನ್ನ ಕುಟುಂಬದ ಸಾಲವನ್ನು ತೀರಿಸುತ್ತೇನೆ ಎಂದು ಹೆಗ್ಗವಾಡಿಪುರ ಗ್ರಾಮದ ವಿದ್ಯಾರ್ಥಿ ಸಚಿವರ ಮುಂದೆ ಅಳಲು ತೋಡಿಕೊಂಡರು. ಯಾವುದೇ ಕಾರಣಕ್ಕೂ ಇಂತಹ ಮಾತುಗಳನ್ನು ಹಾಡಬಾರದು. ನಿಮ್ಮ ಜತೆಗೆ ಸರ್ಕಾರ ಇದೆ ಎಂದು ವಿದ್ಯಾರ್ಥಿಗೆ ಸಚಿವರು ಭರವಸೆ ನೀಡಿದರು.