

ಚಾಮರಾಜನಗರ: ಜಿಲ್ಲೆಯ ಜನರ ಬಹು ದಿನಗಳ ಕನಸಾದ ಚಾಮರಾಜನಗರ ಮೆಟ್ಟುಪಾಳ್ಯಂ ರೈಲ್ವೆ ಮಾರ್ಗ ಯೋಜನೆಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಬೇಕೆಂದು ದಲಿತ ಮುಖಂಡ ವೆಂಕಟರಮಣ ಸ್ವಾಮಿ( ಪಾಪು) ಒತ್ತಾಯಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮರಾಜನಗರ ಮೆಟ್ಟುಪಾಳ್ಯಂ ರೈಲ್ವೆ ಯೋಜನೆ ಜಾರಿಗೆ ಕಳೆದ ಮೂರು ನಾಲ್ಕು ದಶಕಗಳಿಂದ ನಿರಂತರ ಹೋರಾಟ ನಡೆಯುತ್ತಿದೆ, ಆದರೆ ಕೇಂದ್ರ ಸರ್ಕಾರ ಈ ಬಗ್ಗೆ ಗಮನಹರಿಸಿಲ್ಲ ಎಂದು ಆರೋಪಿಸಿದ ಅವರು ಈ ಯೋಜನೆ ಜಾರಿಗೊಳಿಸಿದಲ್ಲಿ ಸರಕು ಹಾಗೂ ಇತರ ವಾಹನಗಳ ಸಂಚಾರಕ್ಕೆ ದೂರ ಕಡಿಮೆಯಾಗುವುದಲ್ಲದೆ ಡೀಸೆಲ್ ಮತ್ತು ಪೆಟ್ರೋಲ್ ಬಾರಿ ಪ್ರಮಾಣದಲ್ಲಿ ಉಳಿಕೆಯಾಗಲಿದೆ ಎಂದರು.
ಚಾಮರಾಜನಗರ ಮೆಟ್ಟುಪಾಳ್ಯಂ ರೈಲ್ವೆ ಮಾರ್ಗ ಯೋಜನೆಗೆ ಸರ್ವೆ ಕಾರ್ಯ ಕೈಗೊಳ್ಳುವಾಗ ತಾಳವಾಡಿ, ಜೀರ್ಗಳ್ಳಿ, ರಾಮ ದೇವಸ್ಥಾನ ಮೂಲಕ ಸೇಲಂ ಗೆ 60 ಕಿಲೋಮೀಟರ್ ಆಗಲಿದ್ದು, ಈ ಮಾರ್ಗದಲ್ಲಿ ರೈಲ್ವೆ ಮಾರ್ಗ ಮಾಡಿದರೆ ಸಮಯ ಮತ್ತು ಹಣ ಉಳಿತಾಯ ಆಗಲಿದೆ ಎಂದು ಸಲಹೆ ನೀಡಿದರು.
ಈ ಹಿಂದೆ ಮಾಜಿ ಕೇಂದ್ರ ಸಚಿವ ವಿ. ಶ್ರೀನಿವಾಸ್ ಪ್ರಸಾದ್, ಮಾಜಿ ಸಚಿವ ಎಂ.ಮಹದೇವು ಹಾಗೂ ಮಾಜಿ ಸಂಸದ ಎಂ. ಶಿವಣ್ಣ ಹಿಂದಿನ ರೈಲ್ವೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹಾಗೂ ಜಾಫರ್ ಷರೀಫ ರಾಜ್ಯ ಸಚಿವ ಬಸವಣ್ಣ ಗೌಡ(ಯತ್ನಾಳ್) ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಈ ಯೋಜನೆಗೆ ಗ್ರಹಣ ಹಿಡಿದಿದೆ, ಹೀಗಾಗಿ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಚಾಮರಾಜನಗರ ಮೆಟ್ಟುಪಾಳ್ಯಂ ರೈಲ್ವೆ ಮಾರ್ಗ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದಾಗಬೇಕು ಇದರಿಂದ ಗಡಿಭಾಗದ ಕನ್ನಡಿಗರಿಗೆ ಉದ್ಯೋಗ ದೊರೆಯುವ ಜೊತೆಗೆ ವ್ಯಾಪಾರ ಹಾಗೂ ವಾಣಿಜ್ಯ ವ್ಯವಹಾರಗಳು ನಡೆಯುವ ಮೂಲಕ ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸ ಬಹುದು ತಿಳಿಸಿದರು.