ಚಾ.ನಗರ ಮತ್ತು ಹಾಸನ ತಂಡಗಳು ಚಾಂಪಿಯನ್

27rajesh7
Published on

ಚಾಮರಾಜನಗರ: ಪ್ರಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಆಯೋಜಿಸಿದ್ದ 6ನೇ ರಾಜ್ಯಮಟ್ಟದ 19 ವರ್ಷದೊಳಗಿನ ನೆಟ್‌ಬಾಲ್ ಪಂದ್ಯಾವಳಿಯಲ್ಲಿ ಚಾಮರಾಜನಗರ ಮತ್ತು ಹಾಸನ ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿದೆ.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ 6ನೇ ರಾಜ್ಯಮಟ್ಟದ 19 ವರ್ಷದೊಳಗಿನ ನೆಟ್‌ಬಾಲ್ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 16 ಬಾಲಕರ ತಂಡ, 12 ಬಾಲಕಿಯರ ತಂಡಗಳು ಭಾಗವಹಿಸಿದ್ದವು. ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಚಾಮರಾಜನಗರದ ಬಾಲಕಿಯರ ತಂಡ ಪಡೆದುಕೊಂಡಿತು. ದ್ವಿತೀಯ ಸ್ಥಾನವನ್ನು ಹಾಸನ, ತೃತೀಯ ಸ್ಥಾನವನ್ನು ಬೆಂಗಳೂರು ನಗರ ಹಾಗೂ ದಾವಣಗೆರೆ ಪಡೆದುಕೊಂಡಿತು.

ಬಾಲಕರ ವಿಭಾಗದಲ್ಲಿ ಹಾಸನ ಜಿಲ್ಲೆಯ ಬಾಲಕರ ತಂಡ ಪ್ರಥಮ ಸ್ಥಾನ, ಸಮಬಲದ ಹೋರಾಟ ಮಾಡುವ ಮೂಲಕ ದ್ವಿತೀಯ ಸ್ಥಾನವನ್ನು ಚಾಮರಾಜನಗರದ ಬಾಲಕರ ಜಿಲ್ಲಾ ತಂಡ ಪಡೆದುಕೊಂಡಿತು. ಬೆಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಜಂಟಿ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವು.

ಈ ಸಂದರ್ಭದಲ್ಲಿ ರಾಜ್ಯ ನೆಟ್‌ಬಾಲ್ ಅಸೋಸಿಯೇಷನ್‌ನ ಕಾರ್ಯದರ್ಶಿ ಸಿ.ಗಿರೀಶ್, ರಾಜ್ಯ ಉಪಾಧ್ಯಕ್ಷ ಅನಿಲ್, ರಾಜ್ಯ ಖಜಾಂಚಿ ವಿಶ್ವನಾಥ್, ಭಾರತ ತಂಡದ ನೆಟ್‌ಬಾಲ್ ಆಟಗಾರ್ತಿ ಸುರಭಿ, ಮೈಸೂರು ನೆಟ್‌ಬಾಲ್ ಅಸೋಸಿಯೇಷನ್‌ನ ಕಾರ್ಯದರ್ಶಿ ಲೋಕೇಶ್, ಗೌರವ ಸಲಹೆಗಾರ ಅಲಿಖಾನ್ ಸಾಹೇಬ್, ಜಿಲ್ಲಾ ಖೋ ಖೋ ಅಸೋಸಿಯೇಷನ್‌ನ ಅಧ್ಯಕ್ಷ ಶಮಿತ್‌ಕುಮಾರ್, ಹಿರಿಯ ಕ್ರೀಡಾಪಟು ಶ್ರೀನಿವಾಸಗೌಡ, ಆರ್.ಕೃಷ್ಣಮೂರ್ತಿ, ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್‌ನ ಉಪಾಧ್ಯಕ್ಷ ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಮಹದೇವಪ್ರಸಾದ್, ಸಹ ಕಾರ್ಯದರ್ಶಿ ಸುರೇಶ್‌ಕುಮಾರ್, ಖಜಾಂಚಿ ಎಂ.ಸಿ.ಮಹದೇವಸ್ವಾಮಿ, ಸಂಘಟನಾ ಕಾರ್ಯದರ್ಶಿ ಮಧುಕುಮಾರ್ ಹಾಗೂ ಇತರರು ಹಾಜರಿದ್ದರು.

ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿ:

ವಿದ್ಯಾರ್ಥಿಗಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಲು ಕ್ರೀಡೆ ಅತ್ಯಗತ್ಯವಾಗಿದೆ ಎಂದು ಕೇಂದ್ರ ಪರಿಹಾರ ಸಮಿತಿ ನಿಕಟ ಪೂರ್ವ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು ಅವರು ತಿಳಿಸಿದರು. ರಾಜ್ಯಮಟ್ಟದ ನೆಟ್‌ಬಾಲ್ ಪಂದ್ಯಾವಳಿಯಲ್ಲಿ ಸಮಾರೋಪ ಸಮಾರಂಭ ಉದ್ಘಾಟಿಸಿ ಮತ್ತು ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಕ್ರೀಡಾಪಟುಗಳು ಸೋಲು ಹಾಗೂ ಗೆಲುವನ್ನು ಸಮಾನಾಂತರವಾಗಿ ಸ್ವೀಕರಿಸಬೇಕು ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗಬಾರದು ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳು ಓದಿನ ತೆಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಮುಂದಿನ ಭವಿಷ್ಯ ಉಜ್ವಲವಾಗಲು ಸಹಕಾರಿಯಾಗಲಿದೆ. ನಮ್ಮ ಜಿಲ್ಲೆಯ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲೂ ತಮ್ಮ ಅದ್ಭುತ ಪ್ರದರ್ಶನ ನೀಡುವ ಮೂಲಕ ಉತ್ತಮ ಹೆಸರು ಗಳಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು.

ಅಸೋಸಿಯೇಷನ್‌ನ ಗೌರವಾಧ್ಯಕ್ಷೆ ನರ್ಗೀಸ್‌ಬಾನು ಮಾತನಾಡಿ, ನಮ್ಮ ಅಸೋಸಿಯೇಷನ್ ಪ್ರಾರಂಭವಾದ ವರ್ಷದೊಳಗೆ ಇಂತಹ ಅವಕಾಶವನ್ನು ನಮಗೆ ರಾಜ್ಯ ಅಮೆಚೂರ್ ನೆಟ್‌ಬಾಲ್ ಅಸೋಸಿಯೇಷನ್ ಕಲ್ಪಿಸಿರುವುದು ಸಂತೋಷದ ವಿಚಾರ ಎಂದರು. ವಿದ್ಯಾರ್ಥಿಗಳು ಪಂದ್ಯಾವಳಿಯಲ್ಲಿ ಭಾಗವಹಿಸುವುದು ಬಹಳ ಮುಖ್ಯವಾಗುತ್ತದೆ. ಗೆಲುವು ಸಂತೋಷ ಕೊಡುತ್ತದೆ. ಸೋಲು ಪಾಠ ಕಲಿಸುತ್ತದೆ. ಎಲ್ಲಿ ಎಡವಿದ್ದೇವೆ ಎಂಬುದನ್ನು ಸರಿಪಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net