ಚಾ.ನಗರ ಭಾಷಾ ಪದಗಳ ಕುರಿತು ಸಂಶೋಧನೆ ಅಗತ್ಯ

Published on

ಚಾಮರಾಜನಗರ : ಚಾಮರಾಜನಗರ ಭಾಷೆಯ ಪದಗಳಿಗೆ ತನ್ನದೇಯಾದ ವೈಶಿಷ್ಟ್ಯತೆಗಳಿದ್ದು, ಪದಗಳ ಕುರಿತೇ ಉನ್ನತ ಸಂಶೋಧನೆ ಮಾಡುವುದು ಅಗತ್ಯವಾಗಿದೆ ಎಂದು ಜಾನಪದ ಅಕಾಡೆಮಿ ಪುರಸ್ಕೃತ ಜಾನಪದ ವಿದ್ವಾಂಸ ಡಾ.ಬಿ.ಎಸ್.ತಳ್ವಾಡಿ ಸಲಹೆ ನೀಡಿದರು.

ನಗರದ ಜಿಲ್ಲಾ ಕಸಾಪ ಕಚೇರಿಯಲ್ಲಿ ಜಿಲ್ಲಾ ಲೇಖಕರ ಸಂಘ ಮತ್ತು ರಂಗತರಂಗ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಚಾಮರಾಜನಗರ ಜಿಲ್ಲಾ ಜಾನಪದ ಸಂಸ್ಕೃತಿ ಮತ್ತು ಪರಂಪರೆ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜಿಲ್ಲೆಯ ಭಾಷೆ, ಅಡುಗೆ. ಸಂಸ್ಕೃತಿ-ಪರಂಪರೆ ತನ್ನದೇಯಾದ ವೈಶಿಷ್ಟ್ಯತೆಯಿಂದ ಕೂಡಿದೆ. ನಮ್ಮ ಭಾಷೆಯ ಪ್ರತಿಯೊಂದು ಪದಗಳಿಗೂ ತನ್ನದೇಯಾದ ಅರ್ಥವಿದೆ. ಈ ಭಾಷೆಯ ಸತ್ವವನ್ನು ಕುರಿತು ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಅದರಂತೆ ಜಿಲ್ಲೆಯ ಸೋಲಿಗರ ಸಂಸ್ಕೃತಿ ಮತ್ತು ಪರಂಪರೆ ಅತ್ಯಂತ ವಿಶಿಷ್ಟವಾಗಿದೆ. ಪುರೋಹಿತ ಶಾಹಿ ವ್ಯವಸ್ಥೆಯಿಂದ ಅಂತರ ಕಾಯ್ದುಕೊಂಡಿದ್ದ ಜಾನಪದರು ವೈಜ್ಞಾನಿಕ ದೃಷ್ಟಿಯಲ್ಲಿ ಸಾಗಿದ್ದರು ಎಂದು ಹೇಳಿದರು.

ಉತ್ತರ ಭಾಗದಿಂದ ದಕ್ಷಿಣಕ್ಕೆ ಬಂಧ ಮಲೆಮಹದೇಶ್ವರ ಮತ್ತು ಮಂಟೇಸ್ವಾಮಿ ಅವರು, ಕತ್ತಲ ರಾಜ್ಯವನ್ನು ಬೆಳಕಾಗಿಸಿದರು. ಅವರು ಹಾಕಿಕೊಟ್ಟ ಮಾರ್ಗದಿಂದ ವೈಭವೋಪೇತ ಜಾನಪದ ಜಿಲ್ಲೆಯಾಗಿ ರೂಪುಗೊಂಡಿದೆ. ಜಾನಪದದಲ್ಲಿ ಶೀಲ ಎಷ್ಟು ಮುಖ್ಯವೋ, ಅಶ್ಲೀಲವೂ ಅಷ್ಟೇ ಮುಖ್ಯವಾಗುತ್ತದೆ. ಈ ಮೂಲಕ ಬಹುದೊಡ್ಡ ಜಾನಪದ ಕಣಜವಾಗಿದೆ ಎಂದು ತಿಳಿಸಿದರು. ಕಸಾಪ ತಾಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಮಾತನಾಡಿ, ಜಿಲ್ಲೆಯ ಜಾನಪದ ಸಂಸ್ಕೃತಿ ಪರಂಪರೆ ವಿಶ್ವದಲ್ಲೇ ದಾಖಲೆಯಾಗುವಂತಹ ಸತ್ವವನ್ನು ಒಳಗೊಂಡಿದೆ. ಪ್ರತಿಯೊಂದು ಹಳ್ಳಿಗಳಲ್ಲೂ ಸಾವಿರಾರು ಜಾನಪದ ಕಥೆ, ಉಪಕಥೆಗಳು ಇದ್ದು, ಈ ಮೂಲಕ ವಿಶ್ವಕ್ಕೆ ಬಹುದೊಡ್ಡ ಕೊಡುಗೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಕಥೆಗಾರ ಸ್ವಾಮಿ ಪೊನ್ನಾಚಿ ಅವರು ಡಾ.ಬಿ.ಎಸ್.ತಳ್ವಾಡಿ ಕುರಿತು ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ಜಿಲ್ಲಾ ಲೇಖಕರ ಸಂಘದ ಅಧ್ಯಕ್ಷ ರೇಚಂಬಳ್ಳಿ ದುಂಡುಮಾದಯ್ಯ, ರಂಗತರಂಗ ಟ್ರಸ್ಟ್ ಅಧ್ಯಕ್ಷ ಸೋಮಶೇಖರ ಬಿಸಲವಾಡಿ, ರವಿಚಂದ್ರ ಕಹಳೆ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net