ಚಾ.ನಗರ ಜಿಲ್ಲೆಯಲ್ಲಿ ಕೈಗಾರಿಕೆಗೆ ಸಿಗದ ಪ್ರೋತ್ಸಾಹ

Published on

ಚಾಮರಾಜನಗರ: ಜಿಲ್ಲೆಯಲ್ಲಿ ಕೈಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯದೆ ಕೈಗಾರಿಕೋದ್ಯಮ ವಿವಿಧ ಬಗೆಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದು, ಉದ್ಯೋಗ ಮತ್ತು ಅಭಿವೃದ್ಧಿಯ ದೃಷ್ಟಿಯಲ್ಲಿ ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ.

ಜಿಲ್ಲೆಯ ಕೈಗಾರಿಕಾ ಕೇಂದ್ರ ನೀಡಿರುವ ಮಾಹಿತಿಯ ಪ್ರಕಾರ 5 ಬೃಹತ್ ಕೈಗಾರಿಕೆಗಳು, 6 ಮಧ್ಯಮ ಕೈಗಾರಿಕೆಗಳು, 28 ಸೂಕ್ಷ್ಮ ಮತ್ತು 40 ಸಣ್ಣ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದೆ. ಕೈಗಾರಿಕೆಗಳಿಗೆ ಉದ್ಯಮಿಗಳು ಸಾವಿರಾರು ಕೋಟಿ ರೂ. ಬಂಡವಾಳವನ್ನು ಹೂಡಿದ್ದು, 2000ಕ್ಕಿಂತಲೂ ಅಧಿಕ ಉದ್ಯೋಗ ಸೃಷ್ಟಿಯಾಗಿದೆ. ಅದಲ್ಲದೆ, ತಾಲೂಕಿನ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ ಕೆಐಎಡಿಬಿ ಮೊದಲ ಹಂತದಲ್ಲಿ 382 ರೈತರಿಂದ ಸುಮಾರು 1500 ಎಕರೆ ಕೃಷಿ ಭೂಮಿಯನ್ನು ಹಾಗೂ ಎರಡನೇ ಹಂತದಲ್ಲಿ 839 ಎಕರೆ ಭೂಮಿಯ ಸ್ವಾಧೀನಪಡಿಸಿಕೊಂಡಿತ್ತು. ಅದರಂತೆ ಹತ್ತಾರು ಕೈಗಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ಜನರಿಗೆ ಉದ್ಯೋಗ ದೊರಕಿದಂತಾಗಿದೆ.

ಆದರೆ ವಿವಿಧ ಬಗೆಯ ಕೊರೆತಗಳ ಸುಳಿಯಲ್ಲಿ ಸಿಲುಕಿರುವ ಕೈಗಾರಿಕೋದ್ಯಮಿಗಳು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದು, ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕಿದೆ. ಜಿಲ್ಲೆಗೆ ಮತ್ತಷ್ಟು ಪ್ರಮಾಣದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಲಗ್ಗೆ ಇಡಬೇಕಿದೆ. ಕೊಳ್ಳೇಗಾಲ, ಹನೂರು ಹಾಗೂ ಗುಂಡ್ಲುಪೇಟೆ ತಾಲೂಕಿಗೂ ಕೈಗಾರಿಕಾ ವಲಯ ವಿಸ್ತೀರ್ಣಗೊಳ್ಳಬೇಕಿದೆ. ಕೈಗಾರಿಕಾ ಪ್ರದೇಶಕ್ಕೆ ಭೂಮಿಯನ್ನು ನೀಡಿರುವ ರೈತರಿಗೆ ಪರಿಹಾರವನ್ನು ನೀಡಬೇಕಿದೆ. ಅದಲ್ಲದೇ ಸ್ಥಳೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net