ಚಹಾ ಮಾರುವ ವೇಷ, ಮಹಿಳೆಯರ ಬ್ಯಾಗ್​ಗಳೇ ಟಾರ್ಗೆಟ್

Thief
Published on

ಹುಬ್ಬಳ್ಳಿ: ರಾತ್ರಿ ವೇಳೆ ಸಂಚರಿಸುವ ರೈಲುಗಳಲ್ಲಿ ಚಹಾ ಮಾರುವ ವೇಷದಲ್ಲಿ ವ್ಯಾನಿಟಿ ಬ್ಯಾಗ್ ಕದ್ದು ಪರಾರಿಯಾಗುತ್ತಿದ್ದ ಇಬ್ಬರು ಚಾಲಾಕಿ ಕಳ್ಳರನ್ನು ರೈಲ್ವೆ ಪೊಲೀಸರು ಗುರುವಾರ ಬಂಧಿಸಿದ್ದು, ಅವರಿಂದ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದಾರೆ.

ಮಂಟೂರ ರಸ್ತೆ ಜುಬಿಲಿ ಚರ್ಚ್ ಬಳಿಯ ನಿವಾಸಿ ಯೋಹಾನಕುಮಾರ ಪ್ರಾಂಚೀಸ್ ಕುಂರ್ದತಿ (20) ಹಾಗೂ ಪ್ರೇಮಕುಮಾರ ಅಲಿಯಾಸ್ ಚಿಂಟು ಏಸು ಸೂರ್ಯಪಲ್ಲಿ (25) ಬಂಧಿತರು. ಮಹಿಳಾ ಪ್ರಯಾಣಿಕರ ವ್ಯಾನಿಟಿ ಬ್ಯಾಗ್ ಕಳ್ಳತನದ ಕುರಿತು ಹಲವು ಪ್ರಕರಣಗಳು ದಾಖಲಾಗಿದ್ದವು. ರೈಲ್ವೆ ಡಿವೈಎಸ್​ಪಿ ಪುಷ್ಪಲತಾ ಮಾರ್ಗದರ್ಶನದಲ್ಲಿ ರೈಲ್ವೆ ವೃತ್ತದ ಇನ್ಸ್​ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ಹಾಗೂ ಪಿಎಸ್​ಐ ಸತ್ಯಪ್ಪ ಎಂ. ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಸಿಬ್ಬಂದಿ ಎಫ್.ಜಿ. ಪುಲ್ಲಿ, ರವಿ ವಾಲ್ಮೀಕಿ, ಪ್ರವೀಣ ಪಾಟೀಲ, ರಮೇಶ ಲಮಾಣಿ, ಸುಭಾಸ ದಳವಾಯಿ, ರಾಯಪ್ಪ ಗುಂಡಗಿ ತಂಡದಲ್ಲಿದ್ದರು. ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬ್ಯಾಗ್ ಕದ್ದು ಹೊರಗೆ ಎಸೆಯುತ್ತಿದ್ದರು! ರಾತ್ರಿ ಸಂಚರಿಸುವ ರೈಲುಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಕಳ್ಳರು, ಟೀ ಮಾರುವ ವೇಷದಲ್ಲಿ ರೈಲಿನಲ್ಲಿ ಓಡಾಡುತ್ತಿದ್ದರು. ಯೋಹಾನ ಚಹಾ ಮಾರುತ್ತಿದ್ದ ಪ್ರೇಮಕುಮಾರನನ್ನು ಜತೆಗೆ ಕರೆದುಕೊಂಡು ಹೋಗುತ್ತಿದ್ದ. ಪಕ್ಕದಲ್ಲಿ ವ್ಯಾನಿಟಿ ಬ್ಯಾಗ್ ಇಟ್ಟುಕೊಂಡು ಮಲಗಿರುವ ಮಹಿಳಾ ಪ್ರಯಾಣಿಕರನ್ನು ಹುಡುಕುತ್ತಿದ್ದರು. ಯಾರಿಗೂ ಗೊತ್ತಾಗದಂತೆ ಬ್ಯಾಗ್ ತೆಗೆದುಕೊಂಡು, ಚಲಿಸುವ ರೈಲಿನಿಂದ ಹೊರಗೆ ಎಸೆಯುತ್ತಿದ್ದರು. ಮುಂದಿನ ರೈಲು ನಿಲ್ದಾಣದಲ್ಲಿ ಇಳಿದು ವ್ಯಾನಿಟಿ ಬ್ಯಾಗ್ ಎಸೆದ ಸ್ಥಳಕ್ಕೆ ನಡೆದುಕೊಂಡು ಬಂದು ಚಿನ್ನಾಭರಣ, ನಗದು, ಮೊಬೈಲ್ ತೆಗೆದುಕೊಂಡು ಬ್ಯಾಗ್ ಬಿಸಾಕಿ ಪರಾರಿಯಾಗುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net