

ಮೈಸೂರು: ಸೌಜನ್ಯಾ ಕೊಲೆ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಲು ಒತ್ತಾಯಿಸಿ ಆ.28 ರಂದು ಕೈಗೊಂಡಿರುವ ಚಲೋ ಬೆಳ್ತಂಗಡಿ ಹೋರಾಟದ ಪೋಸ್ಟರ್ ಅನ್ನು ಕುವೆಂಪುನಗರದ ಅಕ್ಷಯ ಭಂಡಾರ ವೃತ್ತದಲ್ಲಿ ಗುರುವಾರ ಬಿಡುಗಡೆ ಮಾಡಲಾಯಿತು.
ಜನವಾದಿ ಮಹಿಳಾ ಸಂಘಟನೆ ಹಾಗೂ ಕಟ್ಟಡ ಕಾರ್ಮಿಕ ಸಂಘಟನೆಯ ಮುಖಂಡರು ಧರಣಿ ಪೋಸ್ಟರ್ ಬಿಡುಗಡೆ ಮಾಡಿ ಘೋಷಣೆ ಕೂಗಿದರು.
ಸೌಜನ್ಯಾ ಕೊಲೆ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನಿರ್ದಿಷ್ಟ ಕಾಲ ಮಿತಿಯೊಳಗೆ ತನಿಖೆ ನಡೆಸಿ ಅಪರಾಧಿಗಳನ್ನು ಸೂಕ್ತ ಶಿಕ್ಷೆಗೆ ಒಳಪಡಿಸಬೇಕು.
ಅತ್ಯಾಚಾರ ಪ್ರಕರಣಗಳಲ್ಲಿ ತನಿಖೆ ನಡೆಸಲು ಗೃಹ ಇಲಾಖೆ ನಿಗದಿಪಡಿಸಿರುವ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜಸ್ಟೀಸ್ ವರ್ಮಾ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಲು ಬದ್ಧತೆ ತೋರಿಸಬೇಕು. ಬೆಳ್ತಂಗಡಿ ತಾಲೂಕಿನ ಅಸಹಜ ಸಾವುಗಳ, ಪತ್ತೆಯಾಗದ ಕೊಲೆಗಳ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಆ.28ರಂದು ಚಲೋ ಬೆಳ್ತಂಗಡಿ ಮಹಾ ಧರಣಿ ನಡೆಯಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವಿ ಮಾತನಾಡಿ, ಧರ್ಮಸ್ಥಳದ ಸುತ್ತ ಮುತ್ತ 2001ರಿಂದ 2011ರ ಅವಧಿಯಲ್ಲಿ ಪೊಲೀಸ್ ಮಾಹಿತಿಗಳ ಪ್ರಕಾರ 452 ಅಸಹಜ ಸಾವುಗಳು ಸಂಭವಿಸಿವೆ. ಅಷ್ಟೊಂದು ಅಸಹಜ ಸಾವುಗಳು ಸಂಭವಿಸಿದಾಗಲೂ ಪೊಲೀಸ್ ಇಲಾಖೆ ಅಥವಾ ಜಿಲ್ಲಾಡಳಿತ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ನಿರ್ಲಕ್ಷ್ಯ ವಹಿಸುವ ಮೂಲಕ ದೊಡ್ಡ ಪ್ರಮಾದ ಎಸಗಿದೆ ಎಂದು ಕಿಡಿಕಾರಿದರು.
ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷ ಜಯರಾಮು ಮಾತನಾಡಿ, ಸೌಜನ್ಯಾ ಪ್ರಕರಣದಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಲು ವಿಶೇಷ ತನಿಖಾ ದಳ(ಎಸ್.ಐ.ಟಿ.) ರಚಿಸಬೇಕು. ಜತೆಗೆ 10 ವರ್ಷಗಳ ಅವಧಿಯಲ್ಲಿ ನಡೆದ ಅಸಹಜ ಸಾವುಗಳ ಕಾರಣವನ್ನು ಪತ್ತೆ ಮಾಡಲು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು. ಸಿ.ಬಿ.ಐ. ವಿಶೇಷ ನ್ಯಾಯಾಲಯದ ಸೂಚನೆಯಂತೆ ಕರ್ತವ್ಯ ಲೋಪ ಎಸಗಿದ ತನಿಖಾಧಿಕಾರಗಳು, ಮರಣೋತ್ತರ ಪರೀಕ್ಷೆಯಲ್ಲಿ ಕರ್ತವ್ಯಲೋಪ ಎಸಗಿದ ವೈದ್ಯಾಧಿಕಾರಿಗಳನ್ನೂ ವಿಚಾರಣೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಹಕಾರ್ಯದರ್ಶಿ ಸುಶೀಲಾ, ಜಿಲ್ಲಾ ಮುಖಂಡರಾದ ಆಶಾ, ಸಿಐಟಿಯು ಮುಖಂಡರಾದ ಪ್ರೀತಿ, ಕಟ್ಟಡ ಕಾರ್ಮಿಕ ಸಂಘಟನೆಯ ಜಿಲ್ಲಾ ಅಧ್ಯಕ್ಷ ಎಚ್.ಎಂ.ಬಸವಯ್ಯ, ಪ್ರಧಾನ ಕಾರ್ಯದರ್ಶಿ ನವೀನ್‌ಕುಮಾರ್ ಇತರರು ಇದ್ದರು.