‘ಚಲಿಸುವ ಸರ್ಕಾರ’ ವಾಹನಕ್ಕೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

Ramdas
Published on

ಮೈಸೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ಜನಪರ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಕ್ಷಣಮಾತ್ರದಲ್ಲಿ ಮಾಹಿತಿ ನೀಡಲು ‘ಚಲಿಸುವ ಸರ್ಕಾರ’ ವಾಹನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ನಗರದ ಲಲಿತ ಮಹಲ್ ಪ್ಯಾಲೆಸ್ ಹೋಟೆಲ್ ಆವರಣದಲ್ಲಿ ಚಾಲನೆ ನೀಡಿದರು.

ರಾಜ್ಯದಲ್ಲಿ ಪ್ರಥಮ ಬಾರಿಗೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಪರಿಕಲ್ಪನೆಯಲ್ಲಿ ಈ ಯೋಜನೆ ಜಾರಿ ಮಾಡಲಾಗಿದೆ ಕೇಂದ್ರ ಸರ್ಕಾರದ 202 ಯೋಜನೆಗಳು ಹಾಗೂ 101 ಕಾರ್ಯಕ್ರಮಗಳು ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಕುರಿತು ‘ಚಲಿಸುವ ಸರ್ಕಾರ’ ವಾಹನದಲ್ಲಿ ಜನರಿಗೆ ಮಾಹಿತಿ ದೊರೆಯುತ್ತದೆ.

ವಾಹನವು ಎಲ್ಲ ಬೂತ್‌ಮಟ್ಟದಲ್ಲಿ ನಿರ್ದಿಷ್ಟ ಸಮಯದಲ್ಲಿ, ನಿರ್ದಿಷ್ಟ ದಿನಾಂಕದಲ್ಲಿ ಸರ್ಕಾರದ ಎಲ್ಲ ಯೋಜನೆಗಳನ್ನು ಎಲ್ಇಡಿ ಸ್ಕ್ರೀನ್ ಮೂಲಕ ತೋರಿಸುವುದು ಮತ್ತು ಸ್ಥಳದಲ್ಲೇ ಅರ್ಹ ವ್ಯಕ್ತಿಗಳಿಗೆ ಅವರಿಗೆ ಬೇಕಾದ ಯೋಜನೆಗಳಿಗೆ ಆನ್‌ಲೈನ್ ಮೂಲಕವಾಗಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಪ್ರತಿಯೊಂದು ಕಾಲೇಜು, ಸಂಘ ಸಂಸ್ಥೆಗಳು, ವಸತಿ ನಿಲಯಗಳ ಮುಂದೆ ಭವಿಷ್ಯದ ಪ್ರಜೆಗಳಿಗೆ ಸರ್ಕಾರದ ಯೋಜನೆಗಳ ಮಾಹಿತಿ ನೀಡುವ ಕಾರ್ಯ ನಡೆಯಲಿದೆ. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕರಾದ ರಾಮದಾಸ್, ಎಲ್. ನಾಗೇಂದ್ರ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net