ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ

19 NRD-5
Published on

ನರಗುಂದ: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ರಡ್ಡೇರನಾಗನೂರ ಗ್ರಾಮದ ಬಳಿ ಶುಕ್ರವಾರ ಸಂಜೆ ಸಂಭವಿಸಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಾರು ಖಾನಾಪುರ ಗ್ರಾಮದ ಗೌಡಪ್ಪಗೌಡ ಹನುಮಂತಗೌಡ ಕಗಧಾಳ ಎಂಬುವರಿಗೆ ಸೇರಿದೆ.

ಘಟನೆ ವಿವರ: ತಾಲೂಕಿನ ಖಾನಾಪುರ ಗ್ರಾಮದಲ್ಲಿ ನೂತನವಾಗಿ ಗಣಪತಿ ದೇವಸ್ಥಾನ ನಿರ್ವಿುಸಲಾಗಿದೆ. ದೇವಸ್ಥಾನದಲ್ಲಿ ಶನಿವಾರ ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಗೌಡಪ್ಪಗೌಡ ಕಗಧಾಳ ಅವರು ನರಗುಂದದಲ್ಲಿ ತಯಾರಾಗಿದ್ದ ಮೂರ್ತಿ ನೋಡಿಕೊಂಡು ಭೈರನಹಟ್ಟಿ ಮಾರ್ಗವಾಗಿ ಖಾನಾಪುರಕ್ಕೆ ತೆರಳುತ್ತಿದ್ದರು. ಕಾರು ರಡ್ಡೇರನಾಗನೂರ ಗ್ರಾಮದ ಬಳಿ ತೆರಳುತ್ತಿದ್ದಾಗ ಏಕಾಏಕಿ (ಬಾನಟ್​ನಲ್ಲಿ) ವಿಪರೀತ ಹೊಗೆ ಕಾಣಿಸಿದೆ. ಎದುರಿಗೆ ಬರುತ್ತಿದ್ದ ಬೈಕ್ ಸವಾರ ಈ ಕುರಿತು ಮಾಹಿತಿ ನೀಡಿದ್ದಾನೆ. ತಕ್ಷಣ ಕಾರು ಚಲಾಯಿಸುತ್ತಿದ್ದ ಗೌಡಪ್ಪಗೌಡ ಕಾರಿನಿಂದ ಜಿಗಿದಿದ್ದಾನೆ. ಅಗ್ನಿಶಾಮಕ ಠಾಣಾಧಿಕಾರಿ ಸಂದೀಪ ಬಸರಗಿ ಹಾಗೂ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ನರಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net