

ಹಾಸನ: ಚಲಿಸುತ್ತಿದ್ದ ಕಾರಿಗೆ ದಿಢೀರನೆ ಬೆಂಕಿ ಕಾಣಿಸಿಕೊಂಡು ಹಿನ್ನಲೆಯಲ್ಲಿ ಕಾರು ಸುಟ್ಟು ಕರಕಲಾಗಿರುವ ಘಟನೆ ನಗರ ಹೊರವಲಯದ ಬಿಟ್ಟಗೌಡನಹಳ್ಳಿ ಮುಖ್ಯ ರಸ್ತೆಯಲ್ಲಿ ಗುರುವಾರ ನಡೆದಿದೆ.
ತಾಲೂಕಿನ ಬಿದರೆಕೆರೆ ಗ್ರಾಮದ ನಾಗೇಶ್ ಅವರಿಗೆ ಸೇರಿದ ಮಹೇಂದ್ರಾ ವೆರಿಟ್ ವಾಹನ (ಕೆಎ05ಎಜಿ1138) ನೋಡ ನೋಡುತ್ತಿದ್ದಂತೆ ಬೆಂಕಿಗಾಹುತಿಯಾಗಿದೆ. ನಾಗೇಶ್ ಹಾಗು ಪ್ರವೀಣ್ ಹನುಮಂತಪುರ ಕಡೆಯಿಂದ ಕಾರಿನಲ್ಲಿ ಬರುತ್ತಿದ್ದರು. ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದರಿಂದ ತಕ್ಷಣವೇ ಕಾರು ನಿಲ್ಲಿಸಿ ಕೆಳಗಿಳಿದಿದ್ದಾರೆ. ಅಗ್ನಿಶಾಮಕ ವಾಹನಕ್ಕೆ ಕರೆ ಮಾಡಿದರೂ ತಕ್ಷಣಕ್ಕೆ ವಾಹನ ಬಾರದ ಹಿನ್ನಲೆ ಕಾರು ಸಂಪೂರ್ಣ ಸುಟ್ಟು ಹೋಗಿದೆ. ಎಚ್‌ಪಿಸಿಎಲ್‌ನ ಜಲ ವಾಹನ ಬಂದಿತಾದರೂ ಅಷ್ಟರಲ್ಲಿ ಎಲ್ಲವೂ ಮುಗಿದು ಹೋಗಿತ್ತು.
ಅತಿಯಾದ ಬಿಸಿಲಿನ ಪರಿಣಾಮ ರಸ್ತೆ ಕಾದ ಕೆಂಡದಂತಾಗಿದ್ದು, ಪ್ಲಾಟ್ ಆಗಿದ್ದ ಟೈಯರ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಅಂದಾಜಿಸಲಾಗಿದೆ. ಕೆಳಗಳಡೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಮಾಲೀಕ ನಾಗೇಶ್ ಅವರು ತಕ್ಷಣವೇ ನಿಲ್ಲಿಸಿ ಅಪಾಯದಿಂದ ಪಾರಾಗಿದ್ದಾರೆ.