

ವಾಡಿ: ಅರ್ಥವಿಲ್ಲದ ಅನುಷ್ಠಾನದ ಮೂಲಕ ದೇಹವನ್ನು ತಪಸ್ಸಿನಲ್ಲಿ ಕೂರಿಸಬೇಡಿ. ನಿರಂತರ ಚಲನೆಯಲ್ಲಿರುವ ಮನಸ್ಸನ್ನು ತಪಸ್ಸು ಮಾಡಲು ಹಚ್ಚಿ ಎಂದು ಬೀದರ್‌ನ ಅಕ್ಕಮಹಾದೇವಿ ಕಾಲೇಜಿನ ಉಪನ್ಯಾಸಕ ಡಾ.ಶಿವಶರಣಪ್ಪ ಹುಗ್ಗಿ ಹೇಳಿದರು.
ಪಟ್ಟಣದಲ್ಲಿ ಬೌದ್ಧ ಸಮಾಜದಿಂದ ವರ್ಷಾವಾಸದ ನಿಮಿತ್ತ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಧಮ್ಮ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಜಗತ್ತಿನಲ್ಲಿ ದುಃಖ ಇದ್ದು, ನಿವಾರಣೆಗೆ ಮಾರ್ಗವಿದೆ ಎಂಬುದನ್ನು ಬುದ್ಧ ಅಂದೇ ಹೇಳಿದ್ದರು. ಧಮ್ಮ ಪುಸ್ತಕದ ಮೂಲಕ ಮಹಾತ್ಮ ಬುದ್ಧರ ನೈಜ ಇತಿಹಾಸ ತಿಳಿಯಬಹುದಾಗಿದೆ ಎಂದರು.
ಮೂರು ಸಾವಿರ ವರ್ಷಗಳ ಹಿಂದೆ ಹಲವರು ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ಲಿಂಗಾಯತ ಧರ್ಮಕ್ಕೆ ಹೋದರು. ಆದರೆ ನೀವು ಮಾತ್ರ ಬೌದ್ಧ ಧಮ್ಮದ ಅನುಯಾಯಿಗಳಾಗಿ ಉಳಿದಿದ್ದೀರಿ. ಬಾಬಾ ಸಾಹೇಬರು ಭೇಟಿ ನೀಡಿದ ನೆಲದಲ್ಲಿ ಹುಟ್ಟಿದ ನೀವುಗಳು ಧನ್ಯರು ಎಂದು ಹೇಳಿದರು.
ಅಣದೂರಿನ ಭಂತೆ ಡಾ.ಧಮ್ಮಾನಂದ ಮಹಾಥೆರೋ ಮಾತನಾಡಿ, ನಶಿಸಿ ಹೋಗುವ ಸಂಪತ್ತಿಗಾಗಿ ಯುದ್ಧ ಮಾಡುತ್ತಿರುವ ಜಗತ್ತಿಗೆ ಬುದ್ಧನ ಅವಶ್ಯಕತೆಯಿದೆ. ಬುದ್ಧ ಹೇಳಿದ ಪ್ರೀತಿಯ ಸೂತ್ರದಿಂದ ಮಾತ್ರ ಎಲ್ಲವನ್ನೂ ಗೆಲ್ಲಬಹುದು ಎಂದು ತಿಳಿಸಿದರು.
ಭಂತೆ ಡಾ.ಜ್ಞಾನಸಾಗರ ಥೆರೋ ಪಂಚಶೀಲ ಬೋಧಿಸಿದರು. ಭಿಕ್ಖುಣಿ ಅರ್ಚಸ್ಕತಿ ಸಾನ್ನಿಧ್ಯ, ಸ್ಥಳೀಯ ಬುದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಕೆ.ಆನಂದಶೀಲ, ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ ಹಾರಕೂಡ, ಪ್ರಮುಖರಾದ ರಘು ಗಟ್ಟು, ಮನೋಜಕುಮಾರ ಹೀರೋಳ್ಳಿ, ಗೋವಿಂದ ಪೂಜಾರಿ, ದೇವಿಂದ್ರ ನಿಂಬರ್ಗಾ, ಖೇಮಲಿಂಗ ಬೆಳಮಗಿ, ವಿಜಯ ಸಿಂಗೆ, ಭೀಮಶಾ ಮೈನಾಳಕರ, ದೊಡ್ಡೇಶ ಬಡಿಗೇರ, ಮಹಾದೇವ ಮಾಲಗತ್ತಿ ಇತರರಿದ್ದರು.
ಮೆಕ್ಸಿಕೋದಾ ಟೊಲೊಸಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಬೀದರ್ ಜಿಲ್ಲೆಯ ಅಣದೂರಿನ ಭಂತೆ ಡಾ. ಧಮ್ಮಾನಂದ ಮಹಾಥೆರೋ, ಭಂತೆ ಡಾ.ಜ್ಞಾನಸಾಗರ ಥೆರೋ ಅವರನ್ನು ಸನ್ಮಾನಿಸಲಾಯಿತು. ಸೂರ್ಯಕಾಂತ ರz್ದೆÃವಾಡಿ ಪ್ರಾಸ್ತಾವಿಕ ಮಾತನಾಡಿದರು. ಸಂತೋಷ ಕೋಮೇಟೆ ನಿರೂಪಣೆ ಮಾಡಿದರು. ಶರಣಬಸು ಶಿರೂರಕರ್ ಸ್ವಾಗತಿಸಿದರು. ರವಿ ಕೋಳಕೂರ ವಂದಿಸಿದರು.