

ಹುಬ್ಬಳ್ಳಿ : ಭಾರತದ ಎಲ್ಲ ರೈಲ್ವೆ ವಲಯಗಳಿಗೆ ಹೋಲಿಸಿದರೆ ನೈಋತ್ಯ ರೈಲ್ವೆ ವಲಯವು ಚಲನಶೀಲತೆಯಲ್ಲಿ ಅತ್ಯುತ್ತಮ ಸುಧಾರಣೆ ಸಾಧಿಸಿದೆ.
ಕಳೆದ ಆರ್ಥಿಕ ವರ್ಷದಲ್ಲಿ ನೈಋತ್ಯ ರೈಲ್ವೆ ವಲಯವು ವಿವಿಧ ಪ್ರಯೋಗಗಳ ಮೂಲಕ ರೈಲುಗಳ ಅಭಿವೃದ್ಧಿ ಚಲನಶೀಲತೆ ಸುಧಾರಿಸಲು ಅನೇಕ ಕ್ರಮಗಳಿಗೆ ಒತ್ತು ನೀಡಿದೆ. ಭಾರತೀಯ ರೈಲ್ವೆಯ ಎಲ್ಲ ವಲಯಗಳ ಪೈಕಿ ನೈಋತ್ಯ ರೈಲ್ವೆಯು ಚಲನಶೀಲತೆ (ಮೊಬಿಲಿಟಿ) ಯಲ್ಲಿ ಶೇ. 53 ರಷ್ಟು ಸುಧಾರಣೆ ಸಾಧಿಸಿದೆ. ಸರಕು ರೈಲುಗಳ ಸರಾಸರಿ ವೇಗವು ಕಳೆದ ಏಪ್ರಿಲ್ 2022 ರಲ್ಲಿ ಪ್ರತಿ ತಾಸಿಗೆ 13.97 ಕಿಮೀನಷ್ಟಿತ್ತು. ಈ ಏಪ್ರಿಲ್ 2023ರ ವೇಳೆಗೆ ಪ್ರತಿ ತಾಸಿಗೆ 21.6 ಕಿಮೀ ಏರಿಕೆ ಕಂಡಿದೆ.
ವಿದ್ಯುದೀಕರಣ ಪೂರ್ಣ: 2022-23ರ ಆರ್ಥಿಕ ವರ್ಷದಲ್ಲಿ ನೈಋತ್ಯ ರೈಲ್ವೆ ವಲಯವು 874 ಕಿ. ಮೀ ವಿದ್ಯುದೀಕರಣವನ್ನು ಪೂರ್ಣಗೊಳಿಸಿದೆ. ಈ ವಿದ್ಯುದೀಕರಣದಿಂದ 2022-23ದಲ್ಲಿ 205 ಕೋಟಿ ರೂ.ನಷ್ಟು ಡೀಸೆಲ್ ವೆಚ್ಚವನ್ನು ಉಳಿಸಿದೆ ಹಾಗೂ 2022-23ರಲ್ಲಿ 24 ರೈಲುಗಳನ್ನು ವಿದ್ಯುತ್ ಇಂಜಿನ್ಗೆ ಪರಿವರ್ತಿಸಲಾಗಿದೆ.
ಜೋಡಿ ಮತ್ತು ನೂತನ ಮಾರ್ಗ ಕಾರ್ಯುರಂಭ : ಕಳೆದ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆ ವಲಯ ವಾಪ್ತಿಯಲ್ಲಿ 228.5 ಕಿ.ಮೀಗಳ ಜೋಡಿ ಮತ್ತು ನೂತನ ಮಾರ್ಗವನ್ನು ಪೂರ್ಣಗೊಳಿಸಿ, ಕಾರ್ಯುರಂಭ ಮಾಡಲಾಗಿದೆ.
ವಿವಿಧ 18 ತಿರುವು ಮತ್ತು ಖಾಯಂ ವೇಗ ನಿರ್ಭಂದಿತ ಸ್ಥಳಗಳನ್ನು ತೆಗೆಯುವ ಮೂಲಕ ರೈಲುಗಳ ವೇಗ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. 2022-23ರಲ್ಲಿ 116 ರೈಲುಗಳ ವೇಗವನ್ನು ಹೆಚ್ಚಿಸುವ ಮೂಲಕ ಒಟ್ಟು 2,718 ನಿಮಿಷ ಸಮಯ ಉಳಿಸಿದೆ. ಉದಾಹರಣೆಗೆ, ಬೆಂಗಳೂರು-ಹುಬ್ಬಳ್ಳಿ ನಡುವೆ ಸಂಚರಿಸುತ್ತಿದ್ದ ರಾಣಿ ಚೆನ್ನಮ್ಮರೈಲು ಈ ಹಿಂದೆ 7 ಗಂಟೆ 50 ನಿಮಿಷ ಸಮಯ ತೆಗೆದುಕೊಳ್ಳುತ್ತಿತ್ತು, ಈಗ ಕೇವಲ 6 ಗಂಟೆ 50 ನಿಮಿಷ ತೆಗೆದುಕೊಳ್ಳುತ್ತದೆ.
ಈ ಎಲ್ಲ ಸುಧಾರಿತ ಕ್ರಮಗಳಿಂದ ನಿಗದಿತ ಸಮಯದೊಳಗೆ ಗೂಡ್ಸ್ ರೈಲುಗಳ ಸಂಚಾರ ಸರಳ ಮತ್ತು ಸುಲಭವಾಗಿದೆ. ಇದರಿಂದ ನೈಋತ್ಯ ರೈಲ್ವೆಯು 46.7 ಮಿಲಿಯನ್ ಟನ್ಗಳ ಲೋಡಿಂಗ್ ಮಾಡುವ ಮೂಲಕ ಹೊಸ ದಾಖಲೆ ನಿರ್ವಿುಸಿದೆ. 2007-08ರಲ್ಲಿದ್ದ 46.24 ಮಿಲಿಯನ್ ಟನ್ ಲೋಡಿಂಗ್ ಮಾಡಿದ್ದ ಹಳೆ ದಾಖಲೆ ಮುರಿದಿದೆ.
ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿನ ಮೂಲಸೌಕರ್ಯಗಳ ಹೆಚ್ಚಳವು ಈಗ ಅಭೂತಪೂರ್ವ ಹಾಗೂ ಬಂಡವಾಳ ಹೂಡಿಕೆಗೆ ಪೂರಕ ವಾತಾವರಣ ಸೃಷ್ಠಿಯಾಗಿದೆ. ಮುಂದಿನ ದಿನಗಳಲ್ಲಿ ರೈಲ್ವೆ ಉದ್ಯಮ ಹಾಗೂ ಪ್ರಯಾಣಿಕರಿಗೆ ಆಯ್ಕೆಯ ಸಾರಿಗೆಯಾಗಿ ಹೊರಹೊಮ್ಮಲಿದೆ ಎಂದು ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಹೇಳಿದ್ದಾರೆ.