

ಅಥಣಿ: ಮನುಷ್ಯನ ದೇಹಕ್ಕೆ ಚರ್ಮವೇ ಹೊದಿಕೆಯಾಗಿದೆ. ಅದಕ್ಕೆ ಯಾವುದೇ ರೀತಿಯ ಸಮಸ್ಯೆ ಬರದಂತೆ ನಾವು ಕಾಪಾಡಿಕೊಳ್ಳುವುದು ಅವಶ್ಯಕ ಎಂದು ಚಿಕ್ಕಮಕ್ಕಳ ತಜ್ಞವೈದ್ಯ ಡಾ.ಚನ್ನಪ್ಪ ಸಂಕ್ರಟ್ಟಿ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ವೈದ್ಯರ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್ ಸಹಯೋಗದಲ್ಲಿ ಸಂಕ್ರಟ್ಟಿ ಆಸ್ಪತ್ರೆಯ ವೈದ್ಯರು ಹಮ್ಮಿಕೊಂಡಿದ್ದ ಉಚಿತ ಚರ್ಮರೋಗ, ಮೊಡವೆ, ಕೂದಲು ಉದುರುವಿಕೆ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರಸಾಯನಿಕಗಳಿಂದ ತಯಾರಿಸಿದ ಸೌಂದರ್ಯ ವರ್ಧಕಗಳನ್ನು ಬಳಕೆ ಮಾಡುವುದರಿಂದ ಚರ್ಮ ರೋಗ ಉಂಟಾಗುತ್ತದೆ. ಹೀಗಾಗಿ ಎಚ್ಚರಿಕೆ ವಹಿಸುವುದು ಅವಶ್ಯಕ ಎಂದು ತಿಳಿಸಿದರು.
ಚರ್ಮರೋಗ ತಜ್ಞ ಡಾ.ಮೇಘನಾ ಸಂಕ್ರಟ್ಟಿ ಮಾತನಾಡಿ, ಪ್ರತಿಯೊಬ್ಬರು ನಿಯಮಿತ ಆಹಾರ, ನಿದ್ದೆ, ಶುದ್ಧ ನೀರು ಕುಡಿಯಬೇಕು. ವ್ಯಾಯಾಮ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಮಾತನಾಡಿ, ಇಂದಿನ ವೇಗದ ಬದುಕಿನಲ್ಲಿ ಜನರು ಆರೋಗ್ಯದ ಕಡೆಗೆ ಗಮನಹರಿಸುವುದು ಅವಶ್ಯವಾಗಿದೆ ಎಂದು ಸಲಹೆ ನೀಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಸಚಿನ ದೇಸಾಯಿ, ಶೇಖರ ಕೋಲಾರ, ಮೇಘರಾಜ ಪರಮಾರ, ಶ್ರೀಕಾಂತ ಅಥಣಿ, ಅರುಣ ಯಲಗುದ್ರಿ, ಅರುಣ ಸೌದಾಗರ, ಅನೀಲ ದೇಶಪಾಂಡೆ, ಡಾ.ಶಶಿಧರ ಸಂಕ್ರಟ್ಟಿ, ಭರತ ಸೋಮಯ್ಯ, ಸಂತೋಷ ಬೋಮ್ಮಣವರ, ಡಾ.ಸಿದ್ದು ಸಂಕ್ರಟ್ಟಿ, ಬಿ.ಬಿ.ಬಿಸಲಾಪೂರ, ಸೋಮು ವಾಂಗಿ, ಶಶಿಕಾಂತ ಹುಲಕುಂದ, ಶಂಕರ ಸಂಕ್ರಟ್ಟಿ ಇತರರಿದ್ದರು.