

ನಾಗಮಂಗಲ: ತಾಲೂಕಿನಲ್ಲಿ ರಾಸುಗಳಿಗೆ ಚರ್ಮಗಂಟು ರೋಗ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ನೀಡಲು ತುರ್ತು ಕ್ರಮ ಕೈಗೊಳ್ಳಬೇಕೆಂದು ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಶುಕ್ರವಾರ ಪಶುಸಂಗೋಪನಾ ಸಚಿವ ಪ್ರಭು ಬಿ. ಚೌಹ್ಹಾಣ್ ಅವರಿಗೆ ಪತ್ರ ಬರೆಯುವ ಜತೆಗೆ ಪಶುಸಂಗೋಪನೆ ಮತ್ತು ಪಶು ವೈದ್ಯ ಇಲಾಖೆಯ ಆಯುಕ್ತೆ ಡಾ.ಅಶ್ವಥಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಕಳೆದ ಡಿ.9ರಂದು ವಿಜಯವಾಣಿ ಪತ್ರಿಕೆಯಲ್ಲಿ ‘ರಾಸುಗಳಲ್ಲಿ ಚರ್ಮಗಂಟು ರೋಗ ಉಲ್ಬಣ’ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟವಾಗಿತ್ತು. ವರದಿಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಕುರಿತಂತೆ ಸಹ ಬೆಳಕು ಚೆಲ್ಲಲಾಗಿತ್ತು. ಈ ವರದಿ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಪಶು ವೈದ್ಯರು ಮತ್ತು ಇತರ ಸಿಬ್ಬಂದಿ ನೇಮಿಸಬೇಕೆಂದು ಸಚಿವರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಒಟ್ಟು 4,79,429 ಜಾನುವಾರುಗಳಿದ್ದು, ಈ ಪೈಕಿ 2633 ಜಾನುವಾರುಗಳು ಚರ್ಮಗಂಟು ರೋಗಕ್ಕೆ ತುತ್ತಾಗಿವೆ. ಇವುಗಳ ಪೈಕಿ 819 ಜಾನುವಾರುಗಳು ರೋಗದಿಂದ ಗುಣಮುಖವಾಗಿದ್ದು, 111 ಜಾನುವಾರುಗಳು ಈ ಮಾರಣಾಂತಿಕ ರೋಗಕ್ಕೆ ಬಲಿಯಾಗಿವೆ. ಜಿಲ್ಲೆಯಲ್ಲಿ ಸುಮಾರು 4,41,000 ಜಾನುವಾರುಗಳಿಗೆ ಕಾಲು ಬಾಯಿ ರೋಗ ತಡೆ ಲಸಿಕೆ ನೀಡಲಾಗಿದೆ. ಅದೇ ರೀತಿ ಚರ್ಮಗಂಟು ರೋಗಕ್ಕೂ ಹೆಚ್ಚಿನ ಲಸಿಕೆ ಒದಗಿಸಲು ಕ್ರಮವಹಿಸಬೇಕು. ಚರ್ಮಗಂಟು ರೋಗವು ಅಂಟು ರೋಗವಾಗಿದ್ದು, ಸಕಾಲದಲ್ಲಿ ಜಾನುವಾರುಗಳಿಗೆ ಲಸಿಕೆ ನೀಡದಿದ್ದಲ್ಲಿ ಸಾವು ಸಂಭವಿಸಲಿದೆ. ಆದ್ದರಿಂದ ಸರ್ಕಾರ ತುರ್ತಾಗಿ ಅಗತ್ಯ ವೈದ್ಯ-ಸಿಬ್ಬಂದಿ ನೇಮಿಸಬೇಕು ಹಾಗೂ ಜಾನುವಾರುಗಳಿಗೆ ಲಸಿಕೆ ನೀಡಲು ಕ್ರಮವಹಿಸಬೇಕೆಂದು ಪತ್ರದಲ್ಲಿ ಕೋರಿದ್ದಾರೆ.