

ಬೀದರ್: ರಾಮನಗರ ಚರ್ಚ್ ಮೇಲೆ ದಾಳಿ ನಡೆಸಿ ಪಾಸ್ಟರ್ ಸೇರಿ ಹಲವರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಖಿಲ ಭಾರತ ಕ್ರೈಸ್ತ ಮಹಾಸಭಾ ಜಿಲ್ಲಾ ಘಟಕ ಆಗ್ರಹಿಸಿದೆ.
ಮಂಗಳವಾರ ಸಿಎಂಗೆ ಬರೆದ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಅವರಿಗೆ ಸಲ್ಲಿಸಿದ ಮಹಾಸಭಾ ಪ್ರಮುಖರು, ಚರ್ಚ್ ನಲ್ಲಿ ಆರಾಧನೆ ಮಾಡುತ್ತಿದ್ದ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿದ್ದು ಖಂಡನೀಯ. ಈ ಪ್ರಕರಣ ಗಂಭೀರ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಏಕಾಏಕಿ ದಾಳಿ ನಡೆಸಿ ಪಾಸ್ಟರ್ ಹಾಗೂ 20 ಭಕ್ತರ ಮೇಲೆ ಹಲ್ಲೆ ಮಾಡಿದ್ದು, ಕೆಲವರು ಗಂಭೀರ ಗಾಯಗೊಂಡಿದ್ದಾರೆ. ಚರ್ಚ್ ನಲ್ಲಿದ್ದ ವಸ್ತುಗಳನ್ನು ಹಾಳು ಮಾಡಲಾಗಿದೆ. ಇದರಿಂದ ಸಮಾಜದ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಮಹಾಸಭಾ ಜಿಲ್ಲಾಧ್ಯಕ್ಷ ಯೇಸು ಆಣದೂರೆ, ಪ್ರಮುಖರಾದ ಸುಂದರ್ರಾಜ್, ಸುರೇಶ ರಾಯ್, ಸ್ವಾಮಿದಾಸ್ ಸೋರಳ್ಳಿಕರ್, ಹೆನ್ರಿ ಹನೋಕ್ ಕಿಡಿಕಾರಿದ್ದಾರೆ.
ಯುವ ಸಂಘ: ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಕ್ರೈಸ್ತರ ಯುವ ಸಂಘ ಎಚ್ಚರಿಸಿದೆ. ಹಲ್ಲೆ ಮಾಡಿದವರನ್ನು ಬಂಧಿಸಬೇಕು. ರಾಜ್ಯದ ಯಾವುದೇ ಭಾಗದಲ್ಲಿ ಇಂಥ ಘಟನೆ ನಡೆಯದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಮೋಜಸ್ ನಿರ್ಣಾಕರ್, ಶಾದ್ರಕ್ ದೊಡ್ಮನಿ, ಜೈಕುಮಾರ್ ಅಮರ್, ಜೇಮ್ಸ್ ಮೇತ್ರೆ, ಅರುಣ್ ದೊಡ್ಡಿ, ಮಹಾಂತೇಶ, ಪ್ರಭಾಕರ ಕಡೇಮನಿ, ಅಭಿಷೇಕ ಮಾನಕಾರೆ, ಜೈಕಾರ ವರ್ಮಾ, ವಿಕಾಸ ಅಡ್ವೆಂಟ್, ಮನೋಹರ ಹೊಸಮನಿ, ರಾಜು ಮೇತ್ರೆ ಸಿಎಂಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.