

ಬೀದರ್: ರಂಗಮಂದಿರ ಬದಲು ಗಣೇಶ ಮೈದಾನದಲ್ಲಿ ಬಹಿರಂಗ ಚರ್ಚೆ ಮಾಡೋಣ ಎಂದು ಹೇಳುವ ಮೂಲಕ ಕೆಪಿಸಿಸಿ ಕಾರ್ಯಾಧ್ಯಕ್ಷ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರು ಈ ಚರ್ಚೆ ಯಿಂದ ಪಲಾಯನವಾಗುವ ಕುತಂತ್ರ ನಡೆಸಿದ್ದಾರೆ ಎಂದು ಸಂಸದ ಭಗವಂತ ಖೂಬಾ ದೂರಿದ್ದಾರೆ.
ಭಾಲ್ಕಿ ವಸತಿ ಯೋಜನೆ ಅಕ್ರಮ ಸೇರಿದಂತೆ ನಾನಾ ವಿಷಯ ಚರ್ಚೆ ಸಂಬಂಧ ಈಶ್ವರ ಖಂಡ್ರೆ ಅವರಿಗೆ ಭಾನುವಾರ ಮತ್ತೊಂದು ಪತ್ರವನ್ನು ಬರೆದಿರುವ ಖೂಬಾ, ನಿಮಗೆ ಚರ್ಚೆ ಬೇಕಾಗಿಲ್ಲ, ಕೇವಲ ಸ್ಟಂಟ್ ಮಾಡುತ್ತಿರುವಿರಿ. ನ. 5 ರಂದು ಬೆಳಗ್ಗೆ 11ಕ್ಕೆ ನಗರದ ರಂಗಮಂದಿರದಲ್ಲಿ ಬಹಿರಂಗ ಚರ್ಚೆಗೆ ನಾನು ಒಪ್ಪಿರುವೆ. ಆದರೆ ನೀವು ಈ ಚರ್ಚೆಯನ್ನು ಬೇರೆಡೆ ಒಯ್ಯಲು ಯತ್ನಿಸುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
5ರಂದು ನಗರದ ಗಣೇಶ ಮೈದಾನ ಅಥವಾ ರಂಗಮಂದಿರದಲ್ಲಿ ಬಹಿರಂಗ ಚರ್ಚೆಗೆ ಬನ್ನಿ ಎಂದು ನೀವೇ ಪಂಥಾಹ್ವಾನ ನೀಡಿದ್ದು, ಅದಕ್ಕೆ ನಾನು ಒಪ್ಪಿ ನಾನು ರಂಗಮಂದಿರದಲ್ಲಿ ಚರ್ಚೆಗೆ ಬರಲು ಪತ್ರ ಬರೆದು ತಿಳಿಸಿರುವೆ. ಆದರೆ ಬಹಿರಂಗ ಚರ್ಚೆಗೆ ರಂಗಮಂದಿರ ತುಂಬ ಚಿಕ್ಕದು ಎಂದು ಹೇಳಿ, ಗಣೇಶ ಮೈದಾನದಲ್ಲಿ ಮಾಡೋಣ ಎನ್ನುತ್ತ ಈ ಚರ್ಚೆ ಯಿಂದ ಪಲಾಯನ ಮಾಡುವ ವಾಮಮಾರ್ಗ ಅನುಸರಿಸುತ್ತಿರುವಿರಿ. ಹೆಚ್ಚು ಜನರನ್ನು ಸೇರಿಸಿದಾಗ ಕಾನೂನು ಸುವ್ಯವಸ್ಥೆ ದಾರಿ ತಪ್ಪುತ್ತದೆ. ಕೋವಿಡ್ ನಿಯಮದ ಕಾರಣಕ್ಕೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಅನುಮತಿ ನೀಡುವುದಿಲ್ಲ. ನಂತರ ಅನುಮತಿ ನೀಡಿಲ್ಲ ಎಂದು ಸರ್ಕಾರದ ಮೇಲೆ ಗೂಬೆ ಕೂರಿಸುವುದು ನಿಮ್ಮ ಕುತಂತ್ರವಾಗಿದೆ ಛೇಡಿಸಿದ್ದಾರೆ.
ಗಣೇಶ ಮೈದಾನದಲ್ಲಿ ದೊಡ್ಡ ಸಭೆ ಮಾಡಬೇಕೆಂಬುದು ಬಹಿರಂಗ ಚರ್ಚೆ ತಪ್ಪಿಸುವ ನಿಮ್ಮ ಪೂರ್ವನಿಯೋಜಿತ ಹುನ್ನಾರವಾಗಿದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ತಾವು ಕೂಲಂಕುಷ ಯೋಚಿಸಬೇಕು. ನಿಮ್ಮ ಈ ವರ್ತನೆ ಮುಂದಿನ ದಿನಗಳಲ್ಲಿ ಇದ್ದ ವರ್ಚಸ್ಸಿಗೂ ಧಕ್ಕೆ ತರುತ್ತದೆ. ಬಹಿರಂಗ ಚರ್ಚೆಗೆ ಅನೇಕರು ಪ್ರಶ್ನೆ ಮತ್ತು ಸಲಹೆ ನನಗೆ ಕಳಿಸುತ್ತಿದ್ದಾರೆ. ಜನತೆಗೆ ಸಹ ವಿವೇಕತನದ ಚರ್ಚೆ ಬೇಕಾಗಿದೆ. ಆದರೆ ಅವಿವೇಕತನ ಮತ್ತು ಆಡಂಬರದ ಚರ್ಚೆಗೆ ಜನರು ಸಹಮತಿಸುವುದಿಲ್ಲ ಎಂಬುದು ತಿಳಿಯರಿ ಎಂದು ಹೇಳಿದ್ದಾರೆ.
ನಾನು ಎರಡು ಬಾರಿ ಲಕ್ಕಿಯಿಂದ ಗೆದ್ದಿರುವುದಾಗಿ ಹೇಳಿರುವಿರಿ. ನೀವು ಓಟ್ ಬ್ಯಾಂಕ್ ಮತ್ತು ತುಷ್ಟೀಕರಣದ ರಾಜಕಾರಣ ಮಾಡಿ ಮೂರು ಸಲ ಗೆದ್ದಿರುವಿರಿ. ಕಳೆದ ಲೋಕಸಭಾ ಚುನಾವಣೆಯಿಂದ ಈವರೆಗೆ ಭೀಮಣ್ಣಾ ಖಂಡ್ರೆ ಅವರ ಹೆಸರು ನಾನು ಎಲ್ಲೂ ತೆಗೆದಿಲ್ಲ. ನಿಮ್ಮ ತಂದೆಯವರ ಹೆಸರು ಸ್ವತಃ ನೀವೇ ಚರ್ಚೆಯಲ್ಲಿ ಎಳೆದು ತಂದಿರುವಿರಿ. ಜಿಲ್ಲೆ, ಭಾಲ್ಕಿ ತಾಲೂಕಿನಲ್ಲಿ ನಿಮ್ಮ ಅವಧಿಯಲ್ಲಿ ಸಾಕಷ್ಟು ಘೋರ ಅವ್ಯವಹಾರ ನಡೆದು, ಬಡವರಿಗೆ ಅನ್ಯಾಯವಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ, ಬಡವರಿಗೆ ನ್ಯಾಯ ನೀಡಬೇಕೆಂಬ ಉದ್ದೇಶದಿಂದ ನಿಮ್ಮೊಂದಿಗೆ ಬಹಿರಂಗ ಚರ್ಚೆಗೆ ಒಪ್ಪಿರುವೆ. ಆದರೆ ನೀವು ಈ ಚರ್ಚೆಗೆ ನಿಮ್ಮ ಪಕ್ಷದ ವೇದಿಕೆ ಮಾಡಿಕೊಂಡು ಇದರಲ್ಲಿ ರಾಜಕೀಯ ಸ್ಟಂಟ್ ಮಾಡಿ, ನಿಮ್ಮ ಮೇಲಿನ ಆರೋಪಗಳಿಂದ ತಪ್ಪಿಸಿಕೊಳ್ಳುವ ಹುನ್ನಾರ ಮಾಡುತ್ತಿರುವುದು ನಿಮ್ಮ ಚಟುವಟಿಕೆಗಳಿಂದ ಕಂಡುಬರುತ್ತಿದೆ ಎಂದು ಟಾಂಗ್ ನೀಡಿದ್ದಾರೆ.
ಸಮಿತಿ ಅಧ್ಯಕ್ಷರಾಗಲು
ಖಾಶೆಂಪುರ ಸಮ್ಮತಿ
ಚರ್ಚೆ ಮಾದರಿ ನಡೆಯಲೆಂಬ ಕಾರಣಕ್ಕೆ ಸಮಿತಿ ರಚನೆ ಪ್ರಸ್ತಾಪಿಸಿರುವೆ. ಶಾಸಕ ಬಂಡೆಪ್ಪ ಖಾಶೆಂಪುರ ಅವರು ಸಮಿತಿ ಅಧ್ಯಕ್ಷತೆ ವಹಿಸಿಕೊಳ್ಳಲು ಸಮ್ಮತಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿ ವೈಯಕ್ತಿಕ ಭ್ರಷ್ಟಾಚಾರ ಸಹ ಚರ್ಚೆಯಾಗಬೇಕು. ಜನಪ್ರತಿನಿಧಿಗಳ ಕೈಗಳು ಸ್ವಚ್ಛವಾಗಿರಬೇಕು. ಸಭೆ ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ನಡೆಬೇಕು. ಅದನ್ನು ಬಿಟ್ಟು ನಿಮಗಿಷ್ಟವಿದ್ದ ಮತ್ತು ನಿಮ್ಮ ಅನುಕೂಲಕ್ಕಾಗಿ ನಾನು ನನ್ನ ಸಮಯ ವ್ಯರ್ಥ ಮಾಡಲ್ಲ, ನನಗೆ ಜನಸೇವೆ ಮಾಡಲಿಕ್ಕೆ ಬಹಳ ಕೆಲಸಗಳಿವೆ. ಸಮಯದ ಮೌಲ್ಯದ ಅರಿವು ನನಗಿದೆ. ಈ ಚರ್ಚೆ ನಮ್ಮಿಬ್ಬರ ಪ್ರತಿಷ್ಠೆ ಚರ್ಚೆಯಲ್ಲ. ಇದು ಭ್ರಷ್ಟಾಚಾರ, ಸ್ವಜನಪಕ್ಷಪಾತ ಹೀಗೆ ಅನೇಕ ವಿಷಯಗಳ ಅವಲೋಕನ ಸಭೆಯಾಗಲಿದೆ ಎಂದು ಖೂಬಾ ಪತ್ರದಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಮನರಂಜನೆ !
ಭಾಲ್ಕಿ ವಸತಿ ಯೋಜನೆ ಅಕ್ರಮ ಸೇರಿ ವಿವಿಧ ವಿಷಯ ಬಗ್ಗೆ ಬಹಿರಂಗ ಚರ್ಚೆ ನಡೆಸುವ ಸಂಬಂಧ ಸಂಸದ ಭಗವಂತ ಖೂಬಾ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶಾಸಕ ಈಶ್ವರ ಖಂಡ್ರೆ ನಡುವಿನ ಆರೋಪ-ಪ್ರತ್ಯಾರೋಪ ದಿನಕ್ಕೊಂದು ತಿರುವು ಪಡೆಯುತ್ತಿವೆ. ಕರೊನಾ ಹಾಗೂ ಅತಿವೃಷ್ಟಿಯ ಈ ಸಂಕಷ್ಟದಲ್ಲಿ ಆಡಳಿತರೂಢ ಹಾಗೂ ಪ್ರತಿಪಕ್ಷ ಮುಖಂಡರ ಚಚರ್ಾ ಸಮರ, ನಾನಾ ಹೇಳಿಕೆಗಳು ಜನಸಾಮಾನ್ಯರಲ್ಲಿ ವಿಭಿನ್ನ ಚರ್ಚೆಗೆ ಕಾರಣವಾಗಿ, ಪುಕ್ಕಟೆ ಮನರಂಜನೆ ನೀಡುತ್ತಿದೆ. ಚರ್ಚಾ ಸಮರ ಬೇಕು, ಬೇಡ ಕುರಿತು ಇದೀಗ ಕೆಲವು ಮಠಾಧೀಶರು ಸೇರಿದಂತೆ ವಿವಿಧ ಸಂಘಟನೆ ಪ್ರಮುಖರಿಂದಲೂ ಹೇಳಿಕೆಗಳು ಬರುತ್ತಿರುವುದು ಗಮನಾರ್ಹ ಎನಿಸಿದೆ. ಲಭ್ಯ ಮಾಹಿತಿ ಪ್ರಕಾರ ಬಹಿರಂಗ ಚರ್ಚೆ ಆಗುವ ಸಾಧ್ಯತೆ ತೀರ ಕಮ್ಮಿ. ಆದರೆ ಈ ಕುರಿತ ಹೇಳಿಕೆ ಸಮರ ಕ್ರಮೇಣ ಜೋರಾಗುತ್ತಿರುವುದು ಸಾಕಷ್ಟು ಪರ-ವಿರೋಧದ ಚರ್ಚೆಗಳಿಗೆ ಕಾರಣವಾಗಿದೆ. ಇದರಿಂದ ಯಾರು ಏನು ಸಾಧಿಸಲು ಹೊರಟಿದ್ದಾರೆ? ಜಿಲ್ಲೆಯ ಅಭಿವೃದ್ಧಿಗೆ ಇದರಿಂದ ಏನಾದರೂ ಫಾಯಿದಾ ಇದೆಯಾ?ಎಂಬಿತ್ಯಾದಿ ಪ್ರಶ್ನೆ ಜನಸಾಮಾನ್ಯರಿಂದ ಕೇಳಿಬರುತ್ತಿವೆ.
ನೀವು ಹೇಳಿದ್ದನ್ನೇ ಮತ್ತೊಬ್ಬರು ಪಾಲಿಸಬೇಕೆಂಬ ಧೋರಣೆ ನಿಮ್ಮ ಮನೆಗೆ ಸೀಮಿತಗೊಳಿಸಿ. ಕರೊನಾ ಸಂದರ್ಭದಲ್ಲಿ ಸಾವಿರಾರು ಜನರಿಗೆ ಸೇರಿಸುವುದು ನಿಯಮಬಾಹಿರ ಎಂದು ತಿಳಿದಿದ್ದರೂ, ಗಣೇಶ ಮೈದಾನದಲ್ಲಿ ಬಹಿರಂಗ ಚರ್ಚೆಗೆ ನಡೆಸೋಣ ಎಂದಿರುವುದು ನಿಮ್ಮ ಭಂಡತನಕ್ಕೆ ಸಾಕ್ಷಿ. ಇನ್ನೂ ಜನರಿಗೆ ಸೇರಿಸುವುದರಲ್ಲಿ ನಮ್ಮಿಬ್ಬರ ಸಾಮಥ್ರ್ಯ ಈಗಾಗಲೇ ಜನರು ಕಂಡಿದ್ದಾರೆ. | ಭಗವಂತ ಖೂಬಾ, ಸಂಸದ