ಚರ್ಚೆಗೆ ಸಿಎಂ ತೆರೆ ಎಳೆದಿದ್ದಾರೆ

Santosh Lad
ಸಂತೋಷ ಲಾಡ್.
Published on

ಚಿತ್ರದುರ್ಗ: ನಾನೇ 5 ವರ್ಷ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರು ಅಧಿಕಾರ ಹಂಚಿಕೆ ಚರ್ಚೆಗೆ ತೆರೆ ಎಳೆದಿದ್ದಾರೆ. ಅವರ ಪರವಿದ್ದು, ನನ್ನ ಸಮ್ಮತಿಯೂ ಇದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಯಾರಾಗಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಪ್ರಿಯಾಂಕ್ ಖರ್ಗೆ ಪ್ರಜಾಪ್ರಭುತ್ವ ತಳಹದಿಯ ಮೇಲೆ ಅವರವರ ಅಭಿಪ್ರಾಯ ತಿಳಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಯಾವ ಗೊಂದಲವಿಲ್ಲ ಎಂದರು.

ಅನ್ಯಪಕ್ಷ ಅಧಿಕಾರದಲ್ಲಿದ್ದರೆ, ಅದನ್ನು ಕೆಡವಲು ಮುಂದಾಗುವುದೇ ಕಳೆದ 9 ವರ್ಷದಿಂದಲೂ ಬಿಜೆಪಿ ಹವ್ಯಾಸವಾಗಿದೆ. ಸಿಬಿಐ, ಇಡಿ ಮೊದಲಾದ ತನಿಖಾ ಸಂಸ್ಥೆಗಳನ್ನೂ ಇದಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಆರೋಪವಿರುವಂಥ ಅನ್ಯಪಕ್ಷದವರು ಬಿಜೆಪಿ ಸೇರಿದ ತಕ್ಷಣ ಶುದ್ಧರಾಗಿ ಬಿಡುತ್ತಾರೆ. ಇದು ಹೇಗೆ ಸಾಧ್ಯ ಎಂದು ವ್ಯಂಗವಾಡಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಿತ್ಯ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಏನೂ ಉತ್ತರಿಸಬೇಕು. ಮೊದಲು ಬಿಜೆಪಿ ವಿರುದ್ಧ ಮಾತನಾಡುತ್ತಿದ್ದರು. ಮೈತ್ರಿ ನಂತರ ಕಾಂಗ್ರೆಸ್ಸನ್ನು ದೂಷಿಸುತ್ತಿದ್ದಾರೆ ಎಂದು ಕೈ ನಾಯಕರು ವಸೂಲಿಗೆ ರಾಜ್ಯಕ್ಕೆ ಬರುತ್ತಿದ್ದಾರೆ ಎಂಬ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದರು.

ಕೇಂದ್ರ ಸರ್ಕಾರ ಪ್ರಚಾರಕ್ಕೆಂದೇ ಅಧಿಕೃತವಾಗಿ 6 ಸಾವಿರ ಕೋಟಿ ರೂ. ಖರ್ಚು ಮಾಡಿದೆ. ಕಳೆದ 9 ವರ್ಷಗಳಿಂದ ಪುಕ್ಕಟೆ ಭಾಷಣ ಬಿಟ್ಟರೆ, ಅನುದಾನ ಬಿಡುಗಡೆ ಮಾಡುತ್ತಿಲ್ಲ. ಶಿಕ್ಷಣಕ್ಕೆ ಶೇ 18 ಜಿಎಸ್‌ಟಿ ವಿಧಿಸಲಾಗಿದೆ. ಇದು ಪ್ರಪಂಚದಲ್ಲಿ ಎಲ್ಲೂ ಇಲ್ಲ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವ, ರೈತರ ಆತ್ಮಹತ್ಯೆ, ಬೆಲೆ ಏರಿಕೆ ಮೊದಲಾದ ವಿಷಯಗಳು ಚರ್ಚೆ ಆಗಬೇಕಿದೆ. ಮಾಧ್ಯಮಗಳಿಗೆ ವಿಶ್ವಗುರು ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ನೀಡಿದ ಕೊಡುಗೆ ಬಹಿರಂಗಪಡಿಸಲಿ. ಬಿಜೆಪಿ ಬರ ಅಧ್ಯಯನದ ಬದಲು ಕೇಂದ್ರದಿಂದ ಅನುದಾನ ಕೊಡಿಸಲಿ. ಈ ಮೂಲಕ ರೈತರ ನೆರವಿಗೆ ಧಾವಿಸಲಿ ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net