ಚರ್ಚೆ ಇಲ್ಲದೇ ಅನುಮೋದನೆಗೊಂಡಿದ್ದ ಮೂರು ಕಾಮಗಾರಿಗಳಿಗೆ ತಡೆ

12
Published on

ಮೈಸೂರು: ಚರ್ಚೆ ಇಲ್ಲದೇ ಹಿಂದಿನ ಸಭೆಯಲ್ಲಿ ಅನುಮೋದನೆಗೊಂಡಿದ್ದ ಮೂರು ಕಾಮಗಾರಿಗಳನ್ನು ತಡೆಹಿಡಿದು ಮುಂದಿನ ಸಭೆಯಲ್ಲಿ ಚರ್ಚಿಸಿ ಸರ್ಕಾರದ ನಿರ್ದೇಶನದಂತೆ ಕ್ರಮಕೈಗೊಳ್ಳಲು ನಿರ್ಣಯಿಸಲಾಯಿತು.
ಉಪ ಮೇಯರ್ ಡಾ.ಜಿ.ರೂಪಾ ಅವರ ಅಧ್ಯಕ್ಷತೆಯಲ್ಲಿ ನಗರಪಾಲಿಕೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಸದಸ್ಯರು ಸೇರಿದಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು ಈ ಸಂಬಂಧ ವಿರೋಧ ವ್ಯಕ್ತಪಡಿಸಿ, ಯಾವುದೇ ಚರ್ಚೆ ಇಲ್ಲದೇ ಸುಮಾರು 4.5 ಕೋಟಿ ರೂ.ನಷ್ಟು ಕಾಮಗಾರಿಗಳಿಗೆ ತರಾತುರಿಯಲ್ಲಿ ಅನುಮೋದನೆ ಪಡೆದುಕೊಳ್ಳಲಾಗಿದೆ. ಇದು ಕೌನ್ಸಿಲ್ ನಿಯಮಗಳಿಗೆ ವಿರುದ್ಧವಾದದ್ದು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಭೆ ಆರಂಭಗೊಳ್ಳುತ್ತಿರುವಂತೆಯೇ ಕಾಂಗ್ರೆಸ್‌ನ ಮಾಜಿ ಮೇಯರ್ ಅಯೂಬ್‌ಖಾನ್ ಅವರು, ಹಿಂದಿನ ಸಭೆಯ ಅಂತಿಮ ಕ್ಷಣದಲ್ಲಿ ಜೆಡಿಎಸ್ ಸದಸ್ಯರು, ಮೇಯರ್ ಅನ್ನು ಸುತ್ತುವರಿದು ಎಳೆದಾಡಿದ್ದು ಸರಿಯಲ್ಲ. ಈ ನಡಾವಳಿ ಯಾರಿಗೂ ಶೋಭೆ ತರುವುದಿಲ್ಲ. ಇದು ರೌಡಿಸಂ ವರ್ತನೆ ಎಂದು ಟೀಕಿಸಿದರು.
ರೌಡಿಸಂ ಎನ್ನುವ ಪದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್‌ನ ಪ್ರೇಮಾ ಶಂಕರೇಗೌಡ, ಎಸ್‌ಬಿಎಂ ಮಂಜು, ಕೆ.ವಿ.ಶ್ರೀಧರ್, ಅಶ್ವಿನಿ ಅನಂತು ಸೇರಿದಂತೆ ಇನ್ನಿತರೆ ಸದಸ್ಯರು ಈ ಪದವನ್ನು ಕಡತದಿಂದ ತೆಗದು ಹಾಕಬೇಕು. ಯಾವುದೇ ಚರ್ಚೆ ಇಲ್ಲದೇ ಅನುನೋದನೆ ಮಾಡಿದ್ದಕ್ಕೆ ಪ್ರತಿಭಟನೆ ಮಾಡಿ ಆಕ್ಷೇಪ ವ್ಯಕ್ತಪಡಿಸಲಾಯಿತು. ನಾವು ಯಾವುದೇ ರೌಡಿಸಂ ಮಾಡಿಲ್ಲ. ಜನಪ್ರತಿನಿಧಿಗಳಿಗೆ ಅಪಮಾನ ಮಾಡಲಾಗಿದೆ ಎಂದರು.
ಇದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ನಡುವೆ ಮಾತಿನ ಚಕಮಕಿ, ಆರೋಪ, ಪ್ರತ್ಯಾರೋಪ ಕೇಳಿ ಬಂದವು. ಉಪ ಮೇಯರ್ ಡಾ.ಜಿ.ರೂಪಾ ಅವರು, ರೌಡಿಸಂ ಪದವನ್ನು ಕಡತದಿಂದ ತೆಗೆದು ಹಾಕುವಂತೆ ಕೌನ್ಸಿಲ್ ಕಾರ್ಯದರ್ಶಿಗೆ ಸೂಚಿಸಿದರು.
ಬಳಿಕ ಅಯೂಬ್‌ಖಾನ್ ಸಹ, ರೌಡಿಸಂ ಪದ ಬಳಿಸಿದ್ದಕ್ಕೆ ಕ್ಷಮೆ ಕೋರುವುದಾಗಿ ತಿಳಿಸಿದ ಬಳಿಕ ಪರಿಸ್ಥಿತಿ ತಿಳಿಗೊಂಡಿತು.
ಮೈಸೂರು ನಗರಪಾಲಿಕೆ ಕಟ್ಟಡಕ್ಕೆ 2.70 ಕೋಟಿ ರೂ. ವೆಚ್ಚದಲ್ಲಿ ಅರಮನೆ ಮಾದರಿ ವಿಶೇಷ ದೀಪಾಲಂಕಾರ ಮಾಡುವುದು, ಮೇಯರ್ ವಾರ್ಡ್‌ಗೆ 1.31 ಕೋಟಿ ರೂ. ಕಾಮಗಾರಿ, ಅಲ್ಲದೇ ಚರಂಡಿ ಕಾಮಗಾರಿಗೆ 1.94 ಕೋಟಿ ರೂ. ಅನುಮೋದನೆ ನೀಡಲಾಗಿದೆ ಎಂದು ಮೇಯರ್ ಶಿವಕುಮಾರ್ ತರಾತುರಿಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಗಿದೆ ಎಂದು ನಿರ್ಣಯ ಮಂಡಿಸಿದ್ದರು. ಆದರೆ, ಅದು ಕೌನ್ಸಿಲ್ ನಿಯಮಾವಳಿಗೆ ವಿರುದ್ಧವಾಗಿದೆ. ಆದ್ದರಿಂದ, ಅದನ್ನು ತಡೆಹಿಡಿದು ಚರ್ಚೆ ನಡೆಸಬೇಕು ಎಂದು ಜೆಡಿಎಸ್ ಸದಸ್ಯರು ಆಗ್ರಹಿಸಿದರು.
ಇದಕ್ಕೆ ಬಿಜೆಪಿ ಸದಸ್ಯರಾದ ಮಾ.ವಿ.ರಾಮಪ್ರಸಾದ್, ಬಿ.ವಿ.ಮಂಜುನಾಥ್, ಸುಬ್ಬಯ್ಯ ಸೇರಿದಂತೆ ಇನ್ನಿತರ ಸದಸ್ಯರು ಸಹ ಧ್ವನಿಗೂಡಿಸಿ ನಿಯಮದ ಪ್ರಕಾರ ಚರ್ಚೆಗೆ ಅವಕಾಶ ನೀಡಿ ಅನುಮೋದನೆ ಪಡೆದುಕೊಳ್ಳಬೇಕಿತ್ತು. ಆದ್ದರಿಂದ, ಚರ್ಚೆಗೆ ಅವಕಾಶ ನೀಡಿ ಈ ಸಭೆಯಲ್ಲಿ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್‌ನ ಅಯೂಬ್‌ಖಾನ್, ಅರೀಫ್ ಹುಸೇನ್, ಶೋಭಾ ಸುನೀಲ್, ಪುಷ್ಪಲತಾ ಜಗನ್ನಾಥ್, ಶಾಂತಕುಮಾರಿ ಇತರರು, ಈಗಾಗಲೇ ಚರ್ಚೆ ಅಗಿ ಅನುಮೋದನೆ ಅಗಿರುವುದರಿಂದ ಮತ್ತೆ ಚರ್ಚೆಗೆ ಅವಕಾಶ ಬೇಡ. ನಿಯಮ ಉಲ್ಲಂಘನೆ ಅಗಿರುವುದರಿಂದ ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಅಭಿಪ್ರಾಯ ಕೇಳಬೇಕು ಎಂದು ಹೇಳಿದರು.
ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಸದಸ್ಯರು ಪಟ್ಟು ಹಿಡಿದಾಗ ಸಭೆಗೆ ಮಾಹಿತಿ ನೀಡಿದ ಕೌನ್ಸಿಲ್ ಕಾರ್ಯದರ್ಶಿ ರಂಗಸ್ವಾಮಿ ಅವರು, ನಿಯಮಾವಳಿ ಪ್ರಕಾರ ಸಭೆಯಲ್ಲಿ ಚರ್ಚೆ ನಡೆದು ಬಳಿಕ ನಿರ್ಣಯ ಕೈಗೊಳ್ಳಬೇಕು. ಆದರೆ, ಚರ್ಚೆಯೇ ಇಲ್ಲದೆ ನಿರ್ಣಯ ಕೈಗೊಂಡಿದ್ದರಿಂದ ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು ವಿವರಿಸಲಾಗಿದೆ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೌನ್ಸಿಲ್ ಕಾರ್ಯದರ್ಶಿ ರೀಡ್ ಆ್ಯಂಡ್ ರೆಕಾರ್ಡ್‌ಗೆ ಬಂದ ನಂತರ ಪತ್ರ ಬರೆಯಬೇಕಾಗಿತ್ತು. ಆದರೆ ಸರ್ಕಾರಕ್ಕೆ ಪತ್ರ ಬರೆಯುವುದು ಅವೈಜ್ಞಾನಿಕ ಎಂದು ಬಿಜೆಪಿಯ ಮಂಜುನಾಥ್ ಹೇಳಿದರು.
ಈಗ ಚರ್ಚೆಗೆ ಅವಕಾಶ ನೀಡಿ, ಅದನ್ನು ಸರ್ಕಾರಕ್ಕೆ ಕಳುಹಿಸಿ ಅಲ್ಲಿಂದ ಬಂದ ಉತ್ತರದ ಮೇಲೆ ಮುಂದಿನ ಕ್ರಮಕೈಗೊಳ್ಳಬೇಕು ಎಂದು ಮಾ.ವಿ.ರಾಮಪ್ರಸಾದ್, ಸುಬ್ಬಯ್ಯ ಸಲಹೆ ನೀಡಿದರು.
ಕಾಮಗಾರಿ ನಡೆಸಲು ಯಾವ ಸದಸ್ಯರ ಆಕ್ಷೇಪ ಇಲ್ಲ. ಆದರೆ, ಚರ್ಚೆ ನಡೆಯದಿದ್ದರಿಂದ ಆಕ್ಷೇಪ ಕೇಳಿ ಬಂದಿವೆ. ಈಗ ನಡೆದಿರುವ ಚರ್ಚೆಯ ನಡಾವಳಿಯನ್ನು ಸರ್ಕಾರಕ್ಕೆ ಕಳುಹಿಸಿ. ಅಲ್ಲಿಯವರೆಗೆ ಕಾಮಗಾರಿ ತಡೆ ಹಿಡಿಯಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಅಂತಿಮವಾಗಿ ಸರ್ಕಾರಕ್ಕೆ ಪತ್ರ ಬರೆದು ಅಲ್ಲಿಂದ ಬರುವ ವರದಿ ಆಧಾರದ ಮುಂದೆ ಮುಂದಿನ ಕ್ರಮಕೈಗೊಳ್ಳಲು ಸಭೆ ನಿರ್ಣಯಿಸಿತು.
ಸಭೆಗೂ ಮುನ್ನ ಸರ್ಕಾರದಿಂದ ನೂತನವಾಗಿ ನಾಮ ನಿರ್ದೇಶಿತರಾದ ಆರ್. ಶ್ರೀನಿವಾಸಮೂರ್ತಿ, ಆರ್.ಎಚ್.ಕುಮಾರ್, ಎಂ.ಯು.ಬಾಲರಾಜು, ಕಲ್ಪನಾ, ನಿರಾಲ್ ಶಾಹ ಪ್ರಮಾಣ ವಚನ ಸ್ವೀಕರಿಸಿದರು. ಪಾಲಿಕೆ ಹೆಚ್ಚುವರಿ ಆಯುಕ್ತೆ ರೂಪಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net