

ಚಿತ್ರದುರ್ಗ: ಜೀವನದಲ್ಲಿ ಮಾಡುವ ಒಳ್ಳೆ ಕೆಲಸ ಚರಿತ್ರೆಯಾಗುತ್ತದೆ ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕು ಮಾರ ಸ್ವಾಮೀಜಿ ಹೇಳಿದರು.
ಶ್ರೀ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ 35ನೇ ವರ್ಷದ 9ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿದ್ದ ಶ್ರೀಗಳು, ಶಿಕ್ಷಕರ ದಿನಾಚರಣೆ ಅಂಗವಾಗಿ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಸಾಲದ ಸುಳಿಯಲ್ಲಿ ಸಿಲುಕಿ ಮದುವೆಯಾಗುವುದಕ್ಕಿಂತ ಗುರುಗಳ ಸಮ್ಮುಖದಲ್ಲಿ ವಿವಾಹವಾಗುವಂಥವರು ಸಹೃದಯವುಳ್ಳ ಶ್ರೀ ಮಂತರು. ದುಡ್ಡು ಶ್ರೀಮಂತಿಕೆ ಕೊಡಬಹುದು. ಆದರೆ, ಅದರಿಂದ ನೆಮ್ಮದಿ ಸಿಗದು. ರಾಷ್ಟ್ರೀಯ ನಾಯಕ ಎಸ್. ನಿಜಲಿಂಗಪ್ಪ ಅವರು ಶ್ರೇಷ್ಠ ವ್ಯಕ್ತಿ, ಪ್ರಾಮಾಣಿಕರಾಗಿ, ಜನಸೇವಕರಾಗಿ ನಮಗೆಲ್ಲ ಮಾದರಿಯಾಗಿದ್ದಾರೆ. ಇಂತಹ ನ್ಯಾಯಯುತ ಬದುಕು ನಮ್ಮದಾಗಬೇಕು. ನವ ದಂಪತಿಗಳು ಸತ್ಯಶುದ್ಧ ಕಾಯಕ ಮಾಡುತ್ತ ಸರಳ ಜೀವನ ಮಾಡಬೇಕು ಎಂದರು.
ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, ಶಿಕ್ಷಕರಾಗಿ ನಂತರ ರಾಷ್ಟ್ರಪತಿ ಹುದ್ದೆಗೇರಿದ ರಾಧಾಕಷ್ಣನ್ ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಶಿಕ್ಷಕರು ನಮ್ಮ ಜೀವನದ ಶಿಲ್ಪಿಗಳು. ಶಿಕ್ಷಕ ವೃತ್ತಿ ಪವಿತ್ರವಾದುದು. ವಿದ್ಯೆಯನ್ನು ಪ್ರತಿಯೊಬ್ಬರೂ ಕಲಿಯಬೇಕು. ಶಿಕ್ಷಕ ತುಂಬಾ ಎಚ್ಚರಿಕೆಯಿಂದ ಇರಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ಸಮಾಜದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಜ್ಞಾನವೇ ಶಿಕ್ಷಣ ಎಂದು ಹೇಳಿದರು.
ಶ್ರೀ ಮುರುಘೇಂದ್ರ ಸ್ವಾಮೀಜಿ, ಫೈಲ್ವಾನ್ ತಿಪ್ಪೇಸ್ವಾಮಿ ಇತರರು ಇದ್ದರು. ಗಂಜಿಗಟ್ಟೆ ಕೃಷ್ಣಮೂರ್ತಿ ಜಾನಪದ ಗೀತೆಗಳನ್ನು ಹಾಡಿದರು. ಜಮುರಾ ಕಲಾವಿದರು ವಚನ ಪ್ರಾರ್ಥಿಸಿದರು. ಚಿನ್ಮಯ ದೇವರು ಸ್ವಾಗತಿಸಿ, ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.
ಪೂರ್ವಭಾವಿ ಸಭೆ
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಜಯದೇವ ಜಂಗಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗುವುದು ಎಂದು ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.
ಶ್ರೀ ಮಠದಲ್ಲಿ ಗುರುವಾರ ಪಂದ್ಯಾವಳಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ದೇಶಾದ್ಯಂತ ಕುಸ್ತಿ ಪಟುಗಳನ್ನು ಪಂದ್ಯಾವಳಿಗೆ ಆಹ್ವಾನಿಸಲು ಸಭೆ ನಿರ್ಧರಿಸಿತು.
ವಕೀಲ ಫಾತ್ಯರಾಜನ್ ಅಧ್ಯಕ್ಷತೆ ವಹಿಸಿದ್ದರು. ನಗರದ ಎಲ್ಲ ಗರಡಿಗಳ ಮುಖ್ಯಸ್ಥರು, ತೀರ್ಪುಗಾರರು, ಕುಸ್ತಿಪಟುಗಳು, ಎಸ್‌ಜೆಎಂ ವಿದ್ಯಾಪೀಠದ ಎಲ್ಲ ದೈಹಿಕ ಶಿಕ್ಷಣ ನಿರ್ದೇಶಕರು ಇತರರು ಇದ್ದರು. ಪಿ. ವೀರೇಂದ್ರಕುಮಾರ್ ಸ್ವಾಗತಿಸಿದರು. ಏಳು ಜೋಡಿಗಳ ವಿವಾಹ ನೆರವೇರಿತು.