

ಬಸವಕಲ್ಯಾಣ: ಸಮುದಾಯ ಕೇಂದ್ರಿತ ಚರಿತ್ರೆಯ ಅಧ್ಯಯನದಿಂದ ಹೊಸ ಸಾಂಸ್ಕೃತಿಕ ತಿಳುವಳಿಕೆ ಹಾಗೂ ಸಾಧ್ಯತೆಗಳು ಅರಿಯಬಹುದು. ಜನ ಸಮುದಾಯದ ನೆಲೆಯಲ್ಲಿ ಚರಿತ್ರೆ ಕಟ್ಟುವ ಪ್ರಯತ್ನ ನಡೆಯಬೇಕು. ಧರ್ಮ ಹಾಗೂ ಸಂಸ್ಕೃತಿಯ ಬಗೆಗೆ ಜನ ಏನು ಅಂದುಕೊಂಡಿದ್ದಾರೆ ಎಂಬುದನ್ನು ಅರ್ಥೈಸಿಕೊಂಡು ದಾಖಲಿಸುವುದೇ ಚರಿತ್ರೆಯಾಗಿದೆ ಎಂದು ಸ್ಲೋವಾಕಿಯಾದ ಕೊಮೆನಿಯಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ದುಶಾನ್ ಡೀಕ್ ಹೇಳಿದರು.
ನಗರದ ಅಲ್ಲಮಪ್ರಭು ಪಿಯು ಕಾಲೇಜಿನಲ್ಲಿ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಮಂಗಳವಾರ ಆಯೋಜಿಸಿದ್ದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂರಚನೆ ಕುರಿತ ಪ್ರತಿಷ್ಠಾನದ ೮೯ನೇ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಮಾಜವು ಬಹು ಧರ್ಮಿಯರಿಂದ, ಭಾಷಿಕರಿಂದ, ಸಂಸ್ಕೃತಿಯಿಂದ ಕೂಡಿದೆ. ಇದನ್ನು ಬಹುತ್ವದ ನೆಲೆಯಲ್ಲಿಯೇ ಅಭ್ಯಾಸಿಸಬೇಕಾಗುತ್ತದೆ. ವಚನಗಳ ಅಧ್ಯಯನ ನಡೆಸಬೇಕಾದರೆ ವಚನಕಾರರ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸಂದರ್ಭದ ಅರಿವು ಮುಖ್ಯವಾಗುತ್ತದೆ. ಕಾಲ ಪ್ರಜ್ಞೆ ಪ್ರಧಾನವಾಗುತ್ತದೆ ಎಂದರು.
ಜಗತ್ತಿನ ಯಾವುದೇ ಭಾಷೆ ಮತ್ತು ಯಾವುದೇ ವಿಶ್ವವಿದ್ಯಾಲಯಗಳು ವಚನಕಾರರ ಬಗೆಗೆ ಅಧ್ಯಯನ ಮಾಡಬೇಕಾದರೆ, ವಚನಗಳ ಮೂಲ ಪಠ್ಯ ಓದಲೇಬೇಕು. ಅನ್ಯ ಭಾಷಿಕರು ಕನ್ನಡದ ಮೇಲೆ ಪ್ರಭುತ್ವ ಪಡೆದು ವಚನವನ್ನು ಗ್ರಹಿಸಬೇಕು. ವಚನಗಳು ಹೊಸ ಸಾಂಸ್ಕೃತಿಕ ಪರಂಪರೆ ರೂಪಿಸಿದ ಪಠ್ಯಗಳು. ಅನುವಾದಿತ ಕೃತಿಗಳಿಗಿಂತ ಮೂಲ ಪಠ್ಯದಿಂದ ಅವುಗಳ ಆಶಯ, ತಾತ್ವಿಕತೆ ಮತ್ತು ಸಿದ್ಧಾಂತಗಳು ಗ್ರಹಿಸಲು ಸಾಧ್ಯ ಎಂದು ಪ್ರತಿಪಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಚಂದ್ರಕಾಂತ ಅಕ್ಕಣ್ಣ ಮಾತನಾಡಿ, ದೇಶಿ ಮತ್ತು ವಿದೇಶಿ ಶಿಕ್ಷಣ ಪದ್ದತಿ ತುಂಬಾ ಭಿನ್ನವಾಗಿದ್ದು, ಸಂಶೋಧನೆಗೆ ಹೊರ ದೇಶಗಳಲ್ಲಿ ಹೆಚ್ಚು ಮಹತ್ವವಿದೆ. ಸಂಶೋಧಕರು ವಿದ್ವಾಂಸರಾದವರಿಗೆ ಸಾಮಾಜಿಕ ಬದ್ಧತೆ ಮತ್ತು ಹೊಣೆಗಾರಿಕೆ ಇರುತ್ತದೆ ಎಂದರು.
ಪ್ರತಿಷ್ಠಾನದ ನಿರ್ದೇಶಕ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ಸಾಹಿತ್ಯದ ಜೀವಂತಿಕೆ ಇರುವುದು ಆಯಾ ಕಾಲಘಟ್ಟದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಮಕಾಲೀನ ಸಂದರ್ಭಕ್ಕೆ ಸ್ಪಂದಿಸುವುದರಲ್ಲಿ. ಲೋಕದ ಎಲ್ಲ ರಚನೆಗಳ ಕುರಿತು ವಿದ್ವತ್ಪೂರ್ಣ ಅನುಸಂಧಾನ ನಡೆಸಿದ ಸಂಶೋಧನೆಗಳು ಹಲವು ಕಾಲ ಸಂಕಥದಗೊಳ್ಳುತ್ತವೆ ಎಂದರು.
ಡಾ.ಶಿವಾಜಿ ಮೇತ್ರೆ, ನಾಗರಾಜ ಮಾನೆ, ಇರ್ಫಾನ್ ಶೇಖ್ ಇತರರಿದ್ದರು. ಶ್ರೀನಿವಾಸ ಶಿಂಧೆ ಸ್ವಾಗತಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ.ಹುಡೇದ ವಂದಿಸಿದರು. ಕಾರ್ಯದರ್ಶಿ ದೇವೇಂದ್ರ ಬರಗಾಲೆ ನಿರೂಪಣೆ ಮಾಡಿದರು.