ಚರಂಡಿಯಲ್ಲಿ ಕುಡಿವ ನೀರಿನ ಪೈಪ್ ಅಳವಡಿಕೆ!

Published on

ಗುಂಡ್ಲುಪೇಟೆ: ಪಟ್ಟಣದ ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಪೈಪುಗಳನ್ನು ಚರಂಡಿಯ ಒಳಭಾಗದಲ್ಲಿ ಅಳವಡಿಸಿರುವುದರಿಂದ ನಿವಾಸಿಗಳು ಸಾಂಕ್ರಾಮಿಕ ರೋಗಭೀತಿಗೆ ಒಳಗಾಗಿದ್ದಾರೆ.

ಪಟ್ಟಣಕ್ಕೆ ಕಬಿನಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು ಇತ್ತೀಚೆಗೆ ಜಲಜೀವನ್ ಮಿಷನ್ ಯೋಜನೆಯಲ್ಲಿ ಮನೆ ಮನೆಗಳಿಗೆ ನಲ್ಲಿ ಸಂಪರ್ಕ ನೀಡಲಾಗುತ್ತಿದೆ. ಇದಕ್ಕಾಗಿ ಎರಡು ವರ್ಷಗಳಿಂದ ಪಟ್ಟಣದ ರಸ್ತೆಗಳನ್ನು ಅಗೆಯಲಾಗಿದೆ. ಎರಡು ಅಡಿ ಆಳದವರೆಗೆ ಹಳ್ಳ ತೆಗೆದು ಪೈಪುಗಳನ್ನು ಹೂಳಲಾಗಿದೆ. ಆದರೆ ಜಿ.ಪಿ.ರಾಜರತ್ನಂ ಬಡಾವಣೆಗೆ ಕುಡಿಯುವ ನೀರು ಸರಬರಾಜು ಮಾಡುವ ಪೈಪುಗಳನ್ನು ಭೂಮಿಯಲ್ಲಿ ಹೂಳದೆ ಚರಂಡಿಯ ಒಳಭಾಗದಲ್ಲಿ ಅಳವಡಿಸಲಾಗಿದೆ.

ಮೊದಲೇ ಹೂಳು ತುಂಬಿಕೊಂಡು ಕೊಳಚೆ ನೀರು ಮಡುಗಟ್ಟಿರುವ ಬಡಾವಣೆಯ ಚರಂಡಿಗಳ ಒಳಗೆ ಜಲಜೀವನ್ ಮಿಷನ್ ಯೋಜನೆಯ ಪೈಪುಗಳನ್ನು ಕೊಂಡೊಯ್ಯಲಾಗಿದ್ದು ಈ ಬಡಾವಣೆಯ ಹಲವಾರು ನಿವಾಸಿಗಳು ಜ್ವರ-ಕೆಮ್ಮು ಮುಂತಾದ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದ ಮನೆಗಳಿಗೆ ಸರಬರಾಜಾಗುವ ಶುದ್ಧ ನೀರಿನೊಂದಿಗೆ ಕಲುಷಿತ ನೀರು ಬೆರೆಯುತ್ತಿರುವ ಅನುಮಾನ ಮೂಡಿಸಿದೆ. ಆದ್ದರಿಂದ ಪುರಸಭೆಯವರು ಚರಂಡಿಗಳ ಮೂಲಕ ಹಾದುಹೋಗಿರುವ ಪೈಪುಗಳನ್ನು ಬದಲಿಸಿ ಭೂಮಿಯ ಒಳಗೆ ಹೂಳುವ ಮೂಲಕ ಮನೆಗಳಿಗೆ ಶುದ್ಧ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು ನಿವಾಸಿಗಳು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net