

ಪಿರಿಯಾಪಟ್ಟಣ: ತಾಲೂಕಿನ ಚಿಟ್ಟೇನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಹಳೆಯ ಕಟ್ಟಡದಲ್ಲಿ ಹಾಲು ಸಂಗ್ರಹ ಪ್ರಕ್ರಿಯೆಯನ್ನು ಏಕಾಏಕಿ ಸ್ಥಗಿತಗೊಳಿಸಿರುವುದನ್ನು ಖಂಡಿಸಿ, ಸೋಮವಾರ ಸಂಜೆ ಉತ್ಪಾದಕರು ಹಾಲನ್ನು ಚರಂಡಿಗೆ ಸುರಿದು ಪ್ರತಿಭಟಿಸಿದರು.
ಗ್ರಾಮದ ಮಹಿಳೆ ಸುಗುಣ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘದ ಹಳೆಯ ಕಟ್ಟಡ ಹಾಗೂ ಗ್ರಾಮ ಹೊರವಲಯದಲ್ಲಿರುವ ಬಿಎಂಸಿ ಕೇಂದ್ರದಲ್ಲಿ ಉತ್ಪಾದಕರಿಂದ ಹಾಲು ಸಂಗ್ರಹಿಸಲಾಗುತ್ತಿತ್ತು. ಬಿಎಂಸಿ ಕೇಂದ್ರ ಹಾಗೂ ಗ್ರಾಮದ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು ಬೆಳಗಿನ ಜಾವ ಹಾಲು ತೆಗೆದುಕೊಂಡು ರೈತರು ರಸ್ತೆ ದಾಟುವುದು ಅಸಾಧ್ಯ. ಈ ವೇಳೆ ಹಲವು ಬಾರಿ ಅಪಘಾತ ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಹಳೆಯ ಕಟ್ಟಡದಲ್ಲಿಯೇ ಹಾಲು ಹಾಕಲು ಉತ್ಪಾದಕರು ಒತ್ತಾಯಿಸಿದರೂ ಊರಿನ ಹೊರಭಾಗದಲ್ಲಿರುವ ಬಿಎಂಸಿ ಕೇಂದ್ರದಲ್ಲಿಯೇ ಹಾಲು ತಂದು ಹಾಕಬೇಕೆಂದು ಒತ್ತಡ ಹೇರಲಾಗುತ್ತಿದೆ. ಅಲ್ಲದೆ, ಯಾವುದೇ ಮಾಹಿತಿ ನೀಡದೆ ಏಕಾಏಕಿ ಸಂಘದ ಹಳೆಯ ಕಟ್ಟಡದ ಹಾಲಿನ ಕೇಂದ್ರ ಮುಚ್ಚಿದ್ದಾರೆ. ಇದರಿಂದ ಹಾಲು ಉತ್ಪಾದಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿದರು.
ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್.ರವಿ ಮಾತನಾಡಿ, ಗ್ರಾಮಸ್ಥರ ಅನುಕೂಲಕ್ಕಾಗಿ ಎರಡು ಕೇಂದ್ರಗಳನ್ನು ತೆರೆದು ಹಾಲು ಖರೀದಿ ಮಾಡಲಾಗುತ್ತಿತ್ತು. ಇದರಿಂದ ಯಾರಿಗೂ ತೊಂದರೆಯಾಗುತ್ತಿರಲ್ಲ. ಏಕಾಏಕಿ ಹಳೆಯ ಕಟ್ಟಡದ ಹಾಲಿನ ಕೇಂದ್ರ ಮುಚ್ಚಿರುವುದು ಸರಿಯಲ್ಲ. ಸಂಬಂಧಪಟ್ಟ ಅಧಿಕಾರಗಳು ಇತ್ತ ಗಮನಹರಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಮಂಜುನಾಥ್, ಪುಟ್ಟರಾಜ್, ಸಂಜು, ರಾಜೇಗೌಡ, ಮಧು, ಪ್ರಶಾಂತ್, ಪರಮೇಶ್, ಬೋರೇಗೌಡ, ಪದ್ಮಮ್ಮ, ಸುಜಾತಾ, ವಿನೋದಮ್ಮ, ಗೀತಾ, ಶೋಭಾ, ಜಯಮ್ಮ, ಯಶೋದಮ್ಮ, ಶೈಲಜಮ್ಮ, ನಂದಿನಿ, ಆಶಾ, ರೇಣುಕಾ, ಕುಮಾರಿ, ಸೌಮ್ಯಾ, ಮಂಜುಳಾ ಇತರರಿದ್ದರು.