

ಹನೂರು: ತಾಲೂಕಿನ ಚಿಕ್ಕಮಾಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದ್ದನೂರು ಗ್ರಾಮದ ಚರಂಡಿಗಳಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯ ತೆರೆವಿಗೆ ಗ್ರಾಪಂ ಆಡಳಿತ ಮುಂದಾಗಿದ್ದು, ಶನಿವಾರದಿಂದ ಕಾರ್ಯಾರಂಭ ಮಾಡಿದೆ.
ಗ್ರಾಮದಲ್ಲಿ ಲಿಂಗಾಯತರು, ನಾಯಕರು, ಪರಿಶಿಷ್ಟ ಜಾತಿ, ಕುರುಬರು ಹಾಗೂ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಾರೆ. ಈ ಬಡಾವಣೆಗಳಲ್ಲಿ ಚರಂಡಿ ನಿರ್ಮಿಸಲಾಗಿದೆ. ಆದರೆ, ಗ್ರಾಮದ ಯಾವುದೇ ಚರಂಡಿಯ ಸ್ವಚ್ಛತೆ ಕಾರ್ಯ ನಡೆದಿಲ್ಲ. ಕಾಲಕಾಲಕ್ಕೆ ಸಂಗ್ರಹವಾದ ತ್ಯಾಜ್ಯವನ್ನು ತೆರೆವುಗೊಳಿಸುವಲ್ಲಿ ಗ್ರಾಪಂ ಆಡಳಿತ ಸಂಪೂರ್ಣ ನಿರ್ಲರ್ಕ್ಷೃ ವಹಿಸಿದೆ. ಇದರಿಂದ ಕಸ, ಕಡ್ಡಿ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯ ತುಂಬಿ ತುಳುಕುತ್ತಿತ್ತು. ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿರಲಿಲ್ಲ. ಪರಿಣಾಮ ಕೊಳಚೆ ನೀರು ಮಡುಗಟ್ಟಿ ನಿಂತಿದ್ದು, ದುರ್ವಾಸನೆ ಬೀರುತ್ತಿತ್ತು. ಅನೈರ್ಮಲ್ಯ ಮನೆ ಮಾಡಿದ್ದು, ಸೊಳ್ಳೆಗಳ ಕಾಟ ವಿಪರೀತವಾಗಿ ನಿವಾಸಿಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಆತಂಕ ಮನೆ ಮಾಡಿತ್ತು. ಈ ಬಗ್ಗೆ ಮೇ 22ರಂದು ವಿಜಯವಾಣಿ ಸಂಚಿಕೆಯಲ್ಲಿ ಉದ್ದನೂರು ಗ್ರಾಮದಲ್ಲಿ ಸಮಸ್ಯೆಗಳ ಸರಮಾಲೆ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತ ಗ್ರಾಪಂ ಅಧಿಕಾರಿಗಳು ಚರಂಡಿಯಲ್ಲಿ ಸಂಗ್ರಹವಾಗಿದ್ದ ಹೂಳು ತೆರವುಗೊಳಿಸಲು ನಿರ್ಧರಿಸಿ ಶನಿವಾರ ಸಿಬ್ಬಂದಿಯಿಂದ ಹೂಳು ತೆರವು ಕಾರ್ಯ ಆರಂಭಿಸಿದ್ದಾರೆ.
ಈ ಸಂಬಂಧ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹದೇವಪ್ರಭು ವಿಜಯವಾಣಿಯೊಂದಿಗೆ ಮಾತನಾಡಿ, ಉದ್ದನೂರು ಗ್ರಾಮದ ಚರಂಡಿಗಳಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಕೆಲವು ಕಾರಣಗಳಿಂದ ತೆರವುಗೊಳಿಸಲು ಸಾಧ್ಯವಾಗಿರಲಿಲ್ಲ. ಪತ್ರಿಕೆಯಲ್ಲಿ ವರದಿ ಬಂದ ಕೂಡಲೇ ಈ ಬಗ್ಗೆ ಅಗತ್ಯ ಕ್ರಮವಹಿಸಿ ಹೂಳನ್ನು ತೆರೆವುಗೊಳಿಸಲಾಗುತ್ತಿದ್ದು, ತ್ಯಾಜ್ಯ ಒಣಗಿದ ಬಳಿಕ ವಿಲೇವಾರಿಗೊಳಿಸಲಾಗುವುದು. ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ತಿಳಿಸಿದರು.