

ಹನೂರು: ನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ. ಚರಂಡಿ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಿಸಿಲ್ಲ. ಇದರಿಂದ ತುಂಬ ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಸಮಸ್ಯೆ ಸರಿಪಡಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಕಣ್ಣೂರು ಗ್ರಾಮದ ಡಾ.ಭೀಮರಾವ್ ಅಂಬೇಡ್ಕರ್ ಯುವಕರ ಸಂಘದ ಪದಾಧಿಕಾರಿಗಳು ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.
ಸಂಘದ ಕಾರ್ಯದರ್ಶಿ ಪ್ರೇಮ್‌ಕುಮಾರ್ ಮಾತನಾಡಿ, ನರೇಗಾ ಯೋಜನೆಯು ಗ್ರಾಮಾಭಿವೃದ್ಧಿಗೆ ಪೂರಕವಾಗಿದ್ದು, ಎಲ್ಲ ಪಂಚಾಯಿತಿಗಳು ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದರ ಮೂಲಕ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಆದರೆ ಕಣ್ಣೂರು ಗ್ರಾಪಂನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿದೆ. ಇದರಿಂದ ಈ ಯೋಜನೆ ಇದ್ದು ಇಲ್ಲದಂತಾಗಿದೆ. ಇತ್ತ ಅಂಬೇಡ್ಕರ್ ಬಡಾವಣೆಯಲ್ಲಿ ಕೆಲವು ಕಡೆ ಚರಂಡಿಯಲ್ಲಿ ಹೂಳು ತೆಗೆಸಿಲ್ಲ. ಇದರಿಂದ ಕೊಳಚೆ ನೀರು ಮಡುಗಟ್ಟಿ ನಿಂತಿದ್ದು, ಮುಖ್ಯ ರಸ್ತೆಗೆ ಹರಿದುಬರುತ್ತಿದೆ. ಇದರಿಂದ ಬಡಾವಣೆಯಲ್ಲಿ ಅನೈರ್ಮಲ್ಯ ಮನೆ ಮಾಡಿದೆ. ರಾತ್ರಿ ವೇಳೆ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ರೋಗರುಜಿನಗಳ ಭೀತಿ ನಮ್ಮನ್ನು ಆವರಿಸಿದೆ ಎಂದರು.
ಇನ್ನು ಕೆಲವೆಡೆ ಚರಂಡಿ ಹಾಗೂ ರಸ್ತೆ ನಿರ್ಮಿಸದ ಪರಿಣಾಮ ಮಳೆಗಾಲದ ವೇಳೆ ಸಂಚರಿಸಲು ಅದರಲ್ಲೂ ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ತುಂಬ ತೊಂದರೆ ಪಡುವಂತಾಗಿದೆ. ಈ ಬಗ್ಗೆ ಹತ್ತಾರು ಬಾರಿ ಗ್ರಾಪಂಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಇದು ಎಷ್ಟರ ಮಟ್ಟಿಗೆ ಸರಿ? ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಿಲ್ ಕಲೆಕ್ಟರ್ ನಿಯೋಜಿಸಿ: ಗ್ರಾಪಂನಲ್ಲಿ ಈ ಹಿಂದೆ ಬಿಲ್ ಕಲೆಕ್ಟರ್ ಆಗಿದ್ದ ರಾಜು ಎಂಬುವರನ್ನು ಅವ್ಯವಹಾರದ ಅರೋಪದಡಿ ಅಮಾನತುಗೊಳಿಸಲಾಗಿದ್ದು, ಎರಡೂವರೆ ವರ್ಷ ಕಳೆದಿದೆ. ಆದರೆ ಖಾಲಿಯಿರುವ ಬಿಲ್ ಕಲೆಕ್ಟರ್ ಹುದ್ದೆಯನ್ನು ಭರ್ತಿ ಮಾಡಿಲ್ಲ. ಇದರಿಂದ ಕೆಲಸ ಕಾರ್ಯಗಳಿಗೆ ತೊಡಕಾಗಿ ಪರಿಣಮಿಸಿದ್ದು, ತೊಂದರೆಯಾಗಿದೆ. ಬಿಲ್ ಕಲೆಕ್ಟರ್ ನಿಯೋಜಿಸುವಂತೆ ಸಭೆ ಹಾಗೂ ಕಚೇರಿಯಲ್ಲಿ ಹಲವು ಬಾರಿ ಮನವಿ ಮಾಡಲಾಗಿದೆ. ಈ ಬಗ್ಗೆ ಗ್ರಾಪಂ ಆಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಆದ್ದರಿಂದ ಇನ್ನು ಮುಂದಾದರೂ ಇತ್ತ ಗಮನಹರಿಸಿ ಬಿಲ್ ಕಲೆಕ್ಟರ್ ನೇಮಕ ಮಾಡುವಂತೆ ಪ್ರತಿಭಟನಕಾರರು ಒತ್ತಾಯಿಸಿದರು.
ಬಳಿಕ ಪಿಡಿಒ ವೈರಮಾಣಿಕ್ಯಂ ಮಾತನಾಡಿ, ಗ್ರಾಪಂನಲ್ಲಿ ಅಧಿಕಾರ ವಹಿಸಿಕೊಂಡು 2 ತಿಂಗಳಷ್ಟೇ ಆಗಿದೆ. ಈಗಾಗಲೇ ನರೇಗಾ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಸಂಬಂಧ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಜತೆಗೆ 15ನೇ ಹಣಕಾಸು ಯೋಜನೆಯಡಿ ಚರಂಡಿ ಹೂಳು ತೆಗೆಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ದೊರೆತ ಕೂಡಲೇ ಈ ಬಗ್ಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಪದಾಧಿಕಾರಿಗಳಾದ ಮಧುಕುಮಾರ್, ಸಿದ್ದರಾಜು, ಚೇತನ್, ಶಿವಸ್ವಾಮಿ, ಶಿವರಾಜು, ಕಿರಣ್, ನಿಶಾಂತ್, ಮಧು, ಪವನ್, ಕೀರ್ತಿ ಹಾಗೂ ಇನ್ನಿತರರಿದ್ದರು.