

ಕುಶಾಲನಗರ; ಸೂಕ್ತ ಚರಂಡಿ ವ್ಯವಸ್ಥೆ ಹಾಗೂ ರಸ್ತೆ ಮಾಡದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ತೊರೆನೂರು ಗ್ರಾಮದ ಗಿರಿಯಪ್ಪ ಬಡಾವಣೆ ನಿವಾಸಿಗಳು ಮಂಗಳವಾರ ಎಚ್ಚರಿಸಿದ್ದಾರೆ.
ಗ್ರಾಮದ ತಗ್ಗು ಪ್ರದೇಶದಲ್ಲಿರುವ ಬಡಾವಣೆಗೆ ಮಳೆಗಾಲದಲ್ಲಿ ಸಂಚಾರ ಅಸಾಧ್ಯ. ಗ್ರಾಮದ ಎತ್ತರ ಪ್ರದೇಶಗಳಿಂದ ಹರಿದು ಬರುವ ನೀರು ಮನೆಗಳಿಗೆ ನುಗ್ಗುತ್ತಿದೆ. ಈ ಹಿಂದಿನಿಂದಲೂ ಕ್ರಮ ವಹಿಸುವಂತೆ ಪಂಚಾಯಿತಿ ಆಡಳಿತಕ್ಕೆ ಒತ್ತಾಯ ಮಾಡಲಾಗುತ್ತಿದೆಯಾದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ ಪಂಚಾಯಿತಿ ಆಡಳಿತ ಚರಂಡಿ ನಿರ್ಮಿಸಲು ಮುಂದಾದ ಸಂದರ್ಭ ರಸ್ತೆಯ ಮಾರ್ಗದಲ್ಲಿರುವ ತೆಂಗಿನ ಮರವನ್ನು ಕಟಾವು ಮಾಡಲು ಮನೆಯ ಮಾಲೀಕರು ಬಿಡದ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ. ಪಂಚಾಯಿತಿಯವರು ಸಾರ್ವಜನಿಕರ ಹಿತದೃಷ್ಟಿಯಿಂದ ತೆಂಗಿನ ಮರ ಕಟಾವು ಮಾಡಿ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ನಿವಾಸಿಗಳು ನಾಮಫಲಕ ಹಾಕಿ ಪ್ರತಿಭಟಿಸಿದರು.
ಗಿರಿಯಪ್ಪ ಬಡಾವಣೆ ನಿವಾಸಿಗಳಿಗೆ ಆಗುತ್ತಿದ್ದ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡಲು ಪಂಚಾಯಿತಿ ವತಿಯಿಂದ ಚರಂಡಿ ನಿರ್ಮಿಸಲು ಮುಂದಾದೆವು. ಆದರೆ, ಕಾಮಗಾರಿಗೆ ಅಡ್ಡಿಯಾಗಿದ್ದ ತೆಂಗಿನ ಮರವನ್ನು ಕಟಾವು ಮಾಡಲು ಮಾಲೀಕ ಬಿಡುತ್ತಿಲ್ಲ. ಹಾಗಾಗಿ ಕಾಮಗಾರಿ ವಿಳಂಬವಾಗಿದೆ. ಶೀಘ್ರ ಸಮಸ್ಯೆ ಇತ್ಯರ್ಥ ಮಾಡುವುದಾಗಿ ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ರೈತ ಟಿ.ಎಲ್.ಮಹೇಶ್ ನೇತೃತ್ವ ವಹಿಸಿದ್ದರು. ನಿವಾಸಿಗಳಾದ ರಾಮಮ್ಮ, ಗೋವಿಂದ, ವನಜಾಕ್ಷಿ, ಕುಮಾರ, ಗಣೇಶ್ ಮೊದಲಾದವರಿದ್ದರು.