

ಯಳಂದೂರು: ಪಟ್ಟಣ ಪಂಚಾಯಿತಿ ವತಿಯಿಂದ ನಗರೋತ್ಥಾನ ಯೋಜನೆಯಡಿ ನಡೆಯುತ್ತಿರುವ ಚರಂಡಿ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಲೋಕಾಯುಕ್ತ, ಪೌರಾಡಳಿತ ನಿರ್ದೇಶನಾಲಯ, ಯೋಜನಾ ನಿರ್ದೇಶಕರು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಪಟ್ಟಣದ ಗೌತಮ್ ಬಡಾವಣೆಯ ನಿವಾಸಿ ವಿನೋದ್‌ಕುಮಾರ್ ದೂರು ಸಲ್ಲಿಸಿದ್ದಾರೆ.
ಪಟ್ಟಣದಿಂದ ಹಾದು ಹೋಗಿರುವ ಈ ಹಿಂದೆ ‘ಯರಿಯೂರು ಕಾಲುವೆ’ ಎಂದು ಕರೆಯುತ್ತಿದ್ದ ಪ್ರಸ್ತುತ ‘ದೊಡ್ಡ ಚರಂಡಿ’ ಎಂದು ಕರೆಯಲ್ಪಡುತ್ತಿರುವ ಚರಂಡಿ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ನಗರೋತ್ಥಾನ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ 1.23 ಕೋಟಿ ರೂ. ವೆಚ್ಚದಲ್ಲಿ ವಿವಿಧ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಕಳೆದ ಜನವರಿ ತಿಂಗಳಲ್ಲಿ ಅಂದಿನ ಶಾಸಕ ಎನ್. ಮಹೇಶ್ ಚಾಲನೆ ನೀಡಿದ್ದರು. ಇದರಲ್ಲಿ ಈ ಚರಂಡಿಯ ದುರಸ್ತಿಯೂ ಸೇರಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.
ಆದರೆ ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ಸಂಬಂಧಪಟ್ಟ ಗುತ್ತಿಗೆದಾರ, ಇಂಜಿನಿಯರ್ ಸ್ಥಳದಲ್ಲಿ ಇರುವುದಿಲ್ಲ. ಸಿಮೆಂಟ್, ಕಬ್ಬಿಣ ಹಾಗೂ ಎಂ ಸ್ಯಾಂಡ್ ಗುಣಮಟ್ಟದಿಂದ ಕೂಡಿಲ್ಲ. ಕಡಿಮೆ ಪ್ರಮಾಣದಲ್ಲಿ ಇವುಗಳ ಬಳಕೆ ಮಾಡಲಾಗಿದೆ. ಇದರ ಬಳಕೆ ಬಗ್ಗೆ ಮಾಹಿತಿ ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ಕೆಲವೆಡೆ ಈಗ ಹಾಕಲಾಗಿರುವ ಕಾಂಕ್ರೀಟ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಕೆಲವೆಡೆ ಡೆಕ್ ನಿರ್ಮಿಸಿದ್ದು, ಇದು ಕೂಡ ಸರಿಯಾಗಿ ಆಗಿಲ್ಲ. ಹಳೆಯ ಚರಂಡಿಯ ಕೆಲವೆಡೆ ಗೋಡೆಗಳನ್ನು ತೆರವುಗೊಳಿಸದೆ ಅದರ ಮೇಲೆಯೇ ಹೊಸ ಗೋಡೆ ನಿರ್ಮಿಸಲಾಗಿದೆ. ಪಟ್ಟಣ ಪಂಚಾಯಿತಿಗೆ ಬಂದಿರುವ ಅನುದಾನ ಸಮರ್ಪಕವಾಗಿ ಸದ್ಬಳಕೆಯಾಗುತ್ತಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಬಗ್ಗೆ ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್‌ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಉನ್ನತ ಮಟ್ಟದ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ದೂರುದಾರ ವಿನೋದ್‌ಕುಮಾರ್ ಮಾಹಿತಿ ನೀಡಿದರು.
ಕಾಮಗಾರಿ ಕಳಪೆ ಹಿನ್ನೆಲೆ ತಾಂತ್ರಿಕ ವಿಭಾಗ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಗುಣಮಟ್ಟ ಪರೀಕ್ಷೆ ನಡೆಸಿದ ಮೇಲೆ ಅಂದಾಜು ಪಟ್ಟಿಯಲ್ಲಿರುವಂತೆ ಕಾಮಗಾರಿ ನಡೆದಿದೆಯೇ ಎಂದು ಪರಿಶೀಲಿಸಿ ನಂತರ ಬಿಲ್ ಪಾವತಿಸಲಾಗುವುದು.
ರವಿಕೀರ್ತಿ, ಮುಖ್ಯಾಧಿಕಾರಿ, ಪಪಂ, ಯಳಂದೂರು.