ಚನ್ನರಾಯಪಟ್ಟಣದಲ್ಲಿ ಬಳ್ಳಾರಿ ರೈತರ ಗುಡುಗು, ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ಪ್ರತಿಭಟಿಸುತ್ತಿರುವ ಕೃಷಿಕರಿಗೆ ಬೆಂಬಲ

3
Published on

ಚನ್ನರಾಯಪಟ್ಟಣ: ನೀವು ದೇವನಹಳ್ಳಿಯಿಂದ ಇಲ್ಲಿಯವರೆಗೆ ಹೆಜ್ಜೆ ಇಟ್ಟಿದ್ದು ನೆಲದ ಮೇಲಲ್ಲ. ಅದು ಮುಖ್ಯಮಂತ್ರಿಯ ಎದೆಯ ಮೇಲಿಟ್ಟ ಹೆಜ್ಜೆಗಳು. ಉಸ್ತುವಾರಿ ಸಚಿವರು, ಕೈಗಾರಿಕಾ ಸಚಿವರ ಎದೆಗಳ ಮೇಲೂ ಒಂದೊಂದು ಹೆಜ್ಜೆ ಇಡುತ್ತಾ ಚನ್ನರಾಯಪಟ್ಟಣಕ್ಕೆ ಬಂದಿದ್ದೀರಿ. ನಿಮ್ಮ ಈ ಹೆಜ್ಜೆಗಳು ವ್ಯರ್ಥವಾಗುವುದಿಲ್ಲ ಎಂದು ರೈತ ಮುಖಂಡ ಕಾರಹಳ್ಳಿ ಶ್ರೀನಿವಾಸ್ ಹೇಳಿದರು.

ಚನ್ನರಾಯಪಟ್ಟಣದಲ್ಲಿ ಕೆಐಎಡಿಬಿಯಿಂದ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ 21 ದಿನಗಳಿಂದ ರೈತರು ನಡೆಸುತ್ತಿರುವ ಧರಣಿಯನ್ನು ಬೆಂಬಲಿಸಿ ಬಳ್ಳಾರಿಯ ಚಾಗನೂರು, ಸಿರಿವಾರದ ರೈತರು, ರೈತ ಮಹಿಳೆಯರ ಜತೆಗೆ ಭಾನುವಾರ ಕಾಲ್ನಡಿಗೆ ಜಾಥಾ ಮಾಡಿ ಮಾತನಾಡಿದರು.

ರೈತ ಮುಖಂಡ ಸ. ರಘುನಾಥ್ ಮಾತನಾಡಿ, ಸರ್ಕಾರ ಭೂಮಿಯನ್ನು ಸೃಷ್ಟಿಸಿಲ್ಲ. ಕೃಷಿ ಭೂಮಿಯು ಕಾಲಾನುಕಾಲದಿಂದ ಉಳುಮೆ ಮಾಡುತ್ತಿರುವ ರೈತನ ಹಕ್ಕು. ಯಾವುದೇ ಬೆಲೆ ತೆತ್ತಾದರೂ ಭೂಮಿ ಉಳಿಸಿಕೊಳ್ಳಲು ಪಣ ತೊಡೋಣ ಎಂದರು.

ಸಾಂಕೇತಿಕ ಬೆಂಬಲ ಅಷ್ಟೇ: ಬಳ್ಳಾರಿ ಜಿಲ್ಲೆಯ ನಾವೆಲ್ಲರೂ ಇಲ್ಲಿಗೆ ಬಂದು ಚನ್ನರಾಯಪಟ್ಟಣ ರೈತರ ಹೋರಾಟಕ್ಕೆ ಸಾಂಕೇತಿಕ ಬೆಂಬಲ ನೀಡಿದ್ದೇವೆ. ಈ ಹೋರಾಟ ಗಟ್ಟಿಯಾಗಿ ನಿಂತರೆ ಉತ್ತರ ಕರ್ನಾಟಕದ ಅಷ್ಟೂ ರೈತರನ್ನು ಕರೆತರುತ್ತೇವೆ. ರೈತರ ಕುಲ ಒಂದೇ ಎಂಬ ಸಂದೇಶ ರವಾನಿಸಿ, ಭೂಮಿ ಉಳಿಸಿಕೊಳ್ಳುತ್ತೇವೆ ಎಂದು ಸಾ. ರಘುನಾಥ್ ಹೇಳಿದರು.

ಬಳ್ಳಾರಿ ವಿಮಾನ ನಿಲ್ದಾಣದ ಮಾದರಿಯಲ್ಲಿ ಹೋರಾಟ: ಬಳ್ಳಾರಿಯ ವಿಮಾನ ನಿಲ್ದಾಣಕ್ಕಾಗಿ ಮಂಜೂರಾಗಿದ್ದ ಭೂಮಿ ಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಬಳ್ಳಾರಿ ರೈತರು ನಡೆಸಿದ್ದ ಹೋರಾಟ ಪ್ರಸ್ತಾಪಿಸಿದ ರೈತ ಮುಖಂಡ ಮಲ್ಲಿಕಾರ್ಜುನರೆಡ್ಡಿ, ಅಲ್ಲಿನ ರೈತರು ಕೂಡ ಪ್ರಾಣ ಬಿಟ್ಟರೂ ಭೂಮಿ ಬಿಡುವುದಿಲ್ಲ ಎಂದು ಪಟ್ಟು ಹಿಡಿದು, ಹೋರಾಡಿದರು. ಪೊಲೀಸರ ಲಾಟಿಗೆ, ಗೋಲಿಬಾರ್‌ಗೆ ಜಗ್ಗದೆ ಹೋರಾಡಿದ ಮಹಿಳೆಯರು, ಯುವಕರು ಹೊಸ ಮೈಲಿಗಲ್ಲು ಸ್ಥಾಪಿಸಿದರು. ಚನ್ನರಾಯಪಟ್ಟಣದಲ್ಲಿ ಅದೇ ಮಾದರಿಯ ಹೋರಾಟಕ್ಕೆ ನಾಂದಿ ಹಾಡಲಾಗಿದೆ ಎಂದು ಸ.ರಘುನಾಥ್ ತಿಳಿಸಿದರು.

ದೇವನಹಳ್ಳಿ ಪೊಲೀಸರು ಕಾಲ್ನಡಿಗೆ ಜಾಥಾ ಹಾಗೂ ಪ್ರತಿಭಟನೆಗೆ ಅವಕಾಶ ನಿರಾಕರಿಸಿದ್ದರು. ಆದರೆ, ಹೋರಾಟ ಎಂಬುದು ಸಂವಿಧಾನಾತ್ಮಕ ಹಕ್ಕು. ಅದನ್ನು ಅಲ್ಲಗೆಳೆಯಲು ಪೊಲೀಸರು ಯಾರು ಎಂದು ಪ್ರಶ್ನಿಸಿದರು. ಸಾಧ್ಯವಾದರೆ, ದೇವನಹಳ್ಳಿಯಲ್ಲೇ ಟೆಂಟು ಹಾಕಿ, ಏನಾಗುತ್ತದೋ ನೋಡಲು ಸಿದ್ಧ. ನಮ್ಮ ಹೋರಾಟ ಶಾಂತಿಯುತವಾಗಿದ್ದು, ಯಾರೊಬ್ಬರಿಗೂ ತೊಂದರೆ ಆಗುವಂತೆ ಇರಬಾರದು ಎಂದು ಕಿವಿಮಾತು ಹೇಳಿದರು.

ರೈತ ಹರೀಶ್ ಮಾತನಾಡಿ, ಬೆಂಗಳೂರಿನ ಜನರಿಗೆ ತರಕಾರಿ, ಹಣ್ಣು, ಹಾಲು ಕೊಟ್ಟಿದ್ದು ಈ ಭಾಗದ ರೈತರು. ಇಂತ ಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳುವುದು ಅಕ್ಷಮ್ಯ. ರೈತರಿಗೆ ಅಗತ್ಯವಿರುವ ಅನುಕೂಲ ಮಾಡಿಕೊಡಬೇಕಾದ ಸರ್ಕಾರವೇ ಭೂಮಿಯನ್ನೇ ಕಿತ್ತುಕೊಳ್ಳುವುದು ಅನ್ಯಾಯ ಎಂದರು.

ಹೋರಾಟಗಾರ ಆಂಜನರೆಡ್ಡಿ ಮಾತನಾಡಿ, ಪರಸ್ಪರ ಜೊತೆಯಾಗಿ ನಾವು ಗೆಲ್ಲೋಣ, ನಾವೆಲ್ಲ ಒಂದಾಗಿ ಹೋರಾಟ ಮಾಡಿದರೆ ಗೆಲುವು ಕಟ್ಟಿಟ್ಟ ಬುತ್ತಿ ಎಂದರು.

ಭೂಸ್ವಾಧೀನ ಹೋರಾಟ ಸಮಿತಿ ಮುಖಂಡರಾದ ನಲ್ಲಪ್ಪನಹಳ್ಳಿ ನಂಜಪ್ಪ, ಮಾರೇಗೌಡ, ದೇವರಾಜ್, ಮುಕುಂದ್, ನಂದನ್, ಧನಂಜಯ, ಗಣೇಶ್, ಕಿಶನ್, ರಮೇಶ್, ಮಾರುತೇಶ್ ಇತರರು ಇದ್ದರು.

ರೈತರ ಸಮುದಾಯ ಉಳಿಯಬೇಕು ಎಂಬುದು ನಮ್ಮ ಬಯಕೆ. ಯಾವಾಗ ಬೇಕಾದರೂ ಬಂದು ನಿಮ್ಮೊಂದಿಗೆ ನಿಲ್ಲಲು ನಾವು ಸಿದ್ಧ. ಗೆದ್ದೇ ಇಲ್ಲಿಂದ ಹೊರಹೋಗೋಣ. ರೈತ ಸಮುದಾಯವನ್ನು ಸಾಲ, ಬಡ್ಡಿ ಎಂಬ ಆತಂಕಕ್ಕೆ ದೂಡಿ, ಸರ್ಕಾರ ಬೇಳೆ ಬೇಯಿಸಿಕೊಳ್ಳುತ್ತಿದೆ. ಮಾಧವರೆಡ್ಡಿ, ರಾಜ್ಯ ರೈತ ಸಂಘ, ಹಸಿರುಸೇನೆ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net