ಚನ್ನರಾಯಪಟ್ಟಣದ 11ನೇ ವಾರ್ಡನಲ್ಲಿ ಯುಜಿಡಿ ಬಗೆಹರಿಸುವಂತೆ ಡಿಸಿ ಮನವಿ

ಚನ್ನರಾಯಪಟ್ಟಣದ 11ನೇ ವಾರ್ಡನಲ್ಲಿ ಯುಜಿಡಿ ಬಗೆಹರಿಸುವಂತೆ ಡಿಸಿ ಮನವಿ
Published on

ಹಾಸನ: ಚನ್ನರಾಯಪಟ್ಟಣದ 11ನೇ ವಾರ್ಡನಲ್ಲಿ ಯುಜಿಡಿ ಕಾಮಗಾರಿ ಅಪೂರ್ಣವಾಗಿದ್ದು, ಸುತ್ತಲಿನ ನಿವಾಸಿಗಳಿಗೆ ದುರ್ವಾಸನೆ ಬೀರುತ್ತಿದೆ. ಕಾಮಗಾರಿ ಪೂರ್ಣಗೊಳಿಸುವಂತೆ ಪುರಸಭೆಗೆ ಎಷ್ಟೇ ಬಾರಿ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿ ಸ್ಥಳೀಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಳೆದ 14 ತಿಂಗಳಿಂದ ಕಾಮಗಾರಿ ನಿಂತಿದೆ. ಪಟ್ಟಣದ ಕೊಳಚೆ ನೀರು ಒಂದೆಡೆ ಬಂದು ನಿಂತಿದ್ದು ಸುತ್ತಲಿನ 30 ಕುಟುಂಬಸ್ಥರಿಗೆ ಭಾರೀ ತೊಂದರೆಯಾಗುತ್ತಿದೆ. ಸೊಳ್ಳೆಗಳ ಕಾಟದಿಂದ ರೋಗ ರುಜಿನ ಹರಡುತ್ತಿದೆ. ರಾತ್ರಿ ಹೊತ್ತಿನಲ್ಲಿ ರಸ್ತೆಯಲ್ಲಿ ನಡೆದಾಡಲು ಆಗದ ಪರಿಸ್ಥಿತಿ ಇದೆ. ಸ್ವಲ್ಪ ಮಳೆಯಾದರೂ ರಸ್ತೆ ಸಂಪೂರ್ಣ ಹಾಳಾಗುತ್ತದೆ ಎಂದು ಆರೋಪಿಸಿದರು.
ಅದೇ ರಸ್ತೆಯಲ್ಲಿ ಪೂರ್ಣಚಂದ್ರ ಕಾನ್ವೆಂಟ್ ಶಾಲೆ ಇದ್ದು, ಸಂಸ್ಥೆಯ ಮಾಲೀಕರು ಯುಜಿಡಿ ಕೆಲಸ ಮಾಡಲು ಬಿಡುತ್ತಿಲ್ಲ. ಪುರಸಭೆ ಮುಖ್ಯಾಧಿಕಾರಿಗೆ ವರ್ಷದಿಂದ ದೂರು ನೀಡುತ್ತಾ ಬಂದರೂ ಪ್ರಯೋಜನವಾಗಿಲ್ಲ. ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಮೂರು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಯಾವ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ದೂರಿದರು.
ಜಿಲ್ಲಾಧಿಕಾರಿ ಕಚೇರಿಗೆ ಡಿಸಿ ಸಿ.ಸತ್ಯಭಾಮ ಆಗಮಿಸುತ್ತಿದ್ದಂತೆ ನಿವಾಸಿಗಳು ಮನವಿ ಸಲ್ಲಿಸಲು ತೆರಳಿದರೂ ಜಿಲ್ಲಾಧಿಕಾರಿಗಳು ತಮಗೆ ಮೀಟಿಂಗ್ ಇದೆ ಎಂದು ಹೇಳಿ ದೂರು ಆಲಿಸದೆ ಕಚೇರಿಯೊಳಗೆ ತೆರಳಿದರು. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಚನ್ನರಾಯಪಟ್ಟಣ 11ನೇ ವಾರ್ಡನ ನಿವಾಸಿಗಳು ವಾಪಾಸ್ಸಾದರು.
ಈ ಸಂದರ್ಭದಲ್ಲಿ ನಿವೃತ್ತ ಸರ್ಕಾರಿ ನೌಕರ ರಂಗೇಗೌಡ, ಭಾನುಮತಿ, ಶಾಂತಮ್ಮ, ಗೀತಾ, ಜವರೇಗೌಡ, ನವೀನ್, ಪೃಥ್ವಿ ಹಾಗು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net