ಚನ್ನಮ್ಮ ವೃತ್ತ ಫ್ಲೈಓವರ್ ಕಾಲು ಕಟ್ ಇಲ್ಲ

h24-Joshi Meeting 2
Published on

ಹುಬ್ಬಳ್ಳಿ: ಸದಾ ವಾಹನ ಹಾಗೂ ಜನ ದಟ್ಟಣೆಯಿಂದ ಕೂಡಿರುವ ಇಲ್ಲಿಯ ಕಿತ್ತೂರ ಚನ್ನಮ್ಮ ವೃತ್ತ ಕೇಂದ್ರಿತವಾಗಿ ನಿರ್ವಿುಸಲು ಉದ್ದೇಶಿಸಿರುವ ಫ್ಲೈಓವರ್​ಗೆ ನಾಲ್ಕೂ ಕಾಲುಗಳು ಇರುವಂತೆ ನೋಡಿಕೊಂಡು ಯೋಜನೆ ಸಮರ್ಪಕ ಜಾರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೂಚನೆ ನೀಡಿದರು.

ಇಲ್ಲಿಯ ರ್ಸಟ್ ಹೌಸ್​ನಲ್ಲಿ ಗುರುವಾರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಕೇಂದ್ರ ಸರ್ಕಾರದ ಅನುದಾನದಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಪ್ಲೈಓವರ್ ಹಾಗೂ ಹಳೇ ಬಸ್ ನಿಲ್ದಾಣ ಮರು ನಿರ್ವಣದಲ್ಲಿ ಆಗುತ್ತಿರುವ ಲೋಪದೋಷಗಳ ಬಗ್ಗೆ ‘ವಿಜಯವಾಣಿ’ ಮಾಡಿದ್ದ ಸರಣಿ ವರದಿ ಪ್ರಸ್ತಾಪಿಸಿದರು. ಚನ್ನಮ್ಮ ವೃತ್ತದಲ್ಲಿ ಕೇಂದ್ರ ಸರ್ಕಾರದ ಅನುದಾನದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗದವರು ಪ್ಲೈಓವರ್ ನಿರ್ಮಾಣ ಮಾಡುತ್ತಿದ್ದಾರೆ. ಅಂದಾಜು 290 ಕೋಟಿ ರೂ. ಯೋಜನೆ ರೂಪಿಸಿದ್ದು, ಅದರಲ್ಲಿ ಹುಬ್ಬಳ್ಳಿ- ಬೆಂಗಳೂರು ರಸ್ತೆಗೆ (ಪಿಬಿ ರೋಡ್) ಮಾಡಬೇಕಾದ ಫ್ಲೈಓವರ್ ಅನ್ನು ಅನುದಾನ ಕೊರತೆ ಹಿನ್ನೆಲೆಯಲ್ಲಿ ಕೈಬಿಡಲು ನಿರ್ಧರಿಸಲಾಗಿತ್ತು. ಅಂದರೆ ಗದಗ ರಸ್ತೆ, ವಿಜಯಪುರ ರಸ್ತೆ, ಧಾರವಾಡ ಕಡೆಗೆ ಹಾಗೂ ಬೆಂಗಳೂರು ಕಡೆ ಹೀಗೆ ನಾಲ್ಕು ಕಾಲುಗಳಿರುವ ಫ್ಲೈಓವರ್ ನಿರ್ವಣಕ್ಕೆ ಆರಂಭದಲ್ಲಿ ಯೋಜನೆ ಮಾಡಲಾಗಿತ್ತು. ಹಣ ಇಲ್ಲ ಎನ್ನುವ ನೆಪ ಮಾಡಿಕೊಂಡು ಬೆಂಗಳೂರು ಕಡೆ ಹೋಗುವ ಮಾರ್ಗ ಕಟ್ ಮಾಡಲಾಗಿತ್ತು. ಇದರಿಂದ ಫ್ಲೈಓವರ್ ನೋಡುವುದಕ್ಕೆ ಮೂರು ಕಾಲಿನ ಜೀವಿಯಂತಾಗುತ್ತಿತ್ತು. ಇದರಿಂದ ಯೋಜನೆಯೇ ವಿಫಲವಾಗುವ ಸ್ಥಿತಿ ತಲೆದೋರಿತ್ತು. ಈ ಬಗ್ಗೆ ‘ವಿಜಯವಾಣಿ’ ಸಮಗ್ರ ವಿವರದೊಂದಿಗೆ ವರದಿ ಮಾಡಿತ್ತು.

ಜಾರಿ ಹೇಗೆ?: ಫ್ಲೈಓವರ್ ಅನ್ನು ಬೆಂಗಳೂರು ರಸ್ತೆ ಮೂಲಕ ಗಬ್ಬೂರಿನವರೆಗೆ ಕೊಂಡೊಯ್ಯಲು ಸುಮಾರು 200 ಕೋಟಿ ರೂ. ಹೆಚ್ಚುವರಿಯಾಗಿ ಬೇಕಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಈ ಹಣವನ್ನು ಹೇಗೆ ಹೊಂದಿಸುವುದು? ಎಂಬ ಬಗ್ಗೆ ಚರ್ಚೆ ನಡೆದು ನಂತರ ಪಾಲುದಾರಿಕೆಯಲ್ಲಿ ಹಣ ಹೊಂದಿಸಬೇಕು. ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ, ಫ್ಲೈಓವರ್ ಟೆಂಡರ್ ಪ್ರಕ್ರಿಯೆ ನಂತರ ಉಳಿಕೆ ಹಣ, ಮಹಾನಗರ ಪಾಲಿಕೆ, ರಾಜ್ಯ ಸರ್ಕಾರ ಹೀಗೆ ವಿವಿಧ ಇಲಾಖೆಗಳಿಂದ ಹಣ ಹೊಂದಿಸುವುದು ಅಗತ್ಯ ಬಿದ್ದರೆ ಸಾಲ ಮಾಡಿ ಫ್ಲೈಓವರ್ ಪೂರ್ತಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು. ಹಾಗಾಗಿ ಫ್ಲೈಓವರ್ ಈ ಮೊದಲು ಯೋಜಿಸಿದಂತೆ ನಾಲ್ಕು ಕಡೆ ಮಾರ್ಗಗಳನ್ನು ಹೊಂದಿದ ಸುವ್ಯವಸ್ಥಿತ ಯೋಜನೆಯಾಗಲಿದೆ. ಇನ್ನು ಹಳೇ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಗ್ಗೆಯೂ ಸುದೀರ್ಘ ಚರ್ಚೆ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ ಅವರು ಸಹ ಹಲವು ಸಲಹೆ ಸೂಚನೆ ನೀಡಿದರು.

ಸ್ ನಿಲ್ದಾಣಕ್ಕೆ ಸಂಪರ್ಕ: ಹುಬ್ಬಳ್ಳಿ ಹಳೇ ಬಸ್ ನಿಲ್ದಾಣವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಮರು ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಚನ್ನಮ್ಮ ವೃತ್ತದ ಫ್ಲೈಓವರ್​ಗೆ ಸಂಪರ್ಕ ಇಲ್ಲದಂತೆ ಅಭಿವೃದ್ಧಿ ಪಡಿಸುತ್ತಿರುವ ಬಗ್ಗೆ ‘ಫ್ಲೈಓವರ್​ಗೆ ಸಂಬಂಧವಿಲ್ಲ, ದಟ್ಟಣೆ ತಪ್ಪುವುದಿಲ್ಲ’ ಎಂಬ ಶೀರ್ಷಿಕೆಯಡಿ ‘ವಿಜಯವಾಣಿ’ ವರದಿ ಪ್ರಕಟಿಸಿ ಬೆಳಕು ಚೆಲ್ಲಿತ್ತು. ಪತ್ರಿಕೆ ವರದಿ ಪ್ರಸ್ತಾಪಿಸಿದ ಕೇಂದ್ರ ಸಚಿವ ಜೋಶಿ ಅವರು, ಫ್ಲೈಓವರ್​ಗೆ ಬಸ್ ನಿಲ್ದಾಣ ಸಂರ್ಪಸುವ ಬಗ್ಗೆ ಎಲ್ಲ ಕೋನಗಳನ್ನು ಇಟ್ಟುಕೊಂಡು ಇನ್ನೊಮ್ಮೆ ಅಧಿಕಾರಿಗಳು ಕುಳಿತು ಚರ್ಚೆ ಮಾಡಬೇಕು ಎಂದು ಆದೇಶ ಮಾಡಿದರು. ಒಂದೊಮ್ಮೆ ಫ್ಲೈಓವರ್​ಗೆ ಸಂಪರ್ಕ ಕೊಡದಿದ್ದರೆ ಎಂದಿನಂತೆ ಮತ್ತೆ ವಾಹನ ದಟ್ಟಣೆಯಾಗುತ್ತದೆ. ಅಲ್ಲದೇ ಫ್ಲೈಓವರ್ ಕಂಬಗಳು ಈಗಿರುವ ರಸ್ತೆ ಮಧ್ಯದಲ್ಲೇ ಬರುವುದರಿಂದ ಹಾಲಿ ರಸ್ತೆಗಳ ಅಗಲ ಈಗಿರುವುದಕ್ಕಿಂತ ಕಡಿಮೆಯಾಗುತ್ತದೆ. ಹಾಗಾಗಿ ಕೆಲವೊಂದು ಬಸ್​ಗಳಾದರೂ ಫ್ಲೈಓವರ್ ಮೇಲೆ ಹೋಗಬೇಕು. ಅದರಿಂದ ದಟ್ಟಣೆ ತಪ್ಪಿಸಬಹುದು ಎಂಬುದರ ಬಗ್ಗೆ ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಪ್ರಸ್ತುತ 2300 ಬಸ್​ಗಳು ನಿತ್ಯ ಹಳೇ ಬಸ್ ನಿಲ್ದಾಣದ ಮೂಲಕ ಕಾರ್ಯಾಚರಣೆ ಮಾಡುತ್ತವೆ. ಅದರಲ್ಲಿ ನಗರ ಸಾರಿಗೆ ಬಸ್​ಗಳು ಸಾವಿರ ಇವೆ. ಉಳಿದ ಬಸ್​ಗಳು ಧಾರವಾಡ ಜಿಲ್ಲೆಯ ಅಕ್ಕಪಕ್ಕ ತಾಲೂಕು ಸೇರಿ ಗ್ರಾಮೀಣ ಬಸ್​ಗಳಿವೆ. ಅವುಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಲು ಅಥವಾ ಫ್ಲೈಓವರ್ ಮೇಲೆ ಕಳಿಸಲು ಬರುವುದಿಲ್ಲ ಎಂದು ವಾಯವ್ಯ ಸಾರಿಗೆ ಅಧಿಕಾರಿಗಳು ತಿಳಿಸಿದರು. ಹಾಗಿದ್ದರೆ ಬಸ್ ನಿಲ್ದಾಣದ ಒಳಗಡೆಯೇ ಫ್ಲೈಓವರ್​ಗೆ ಸಂಪರ್ಕ ಕಲ್ಪಿಸಿ ಒಟ್ಟಾರೆ ಚನ್ನಮ್ಮ ವೃತ್ತದ ಮೇಲಿನ ಒತ್ತಡ ಕಡಿಮೆ ಮಾಡುವ ಬಗ್ಗೆ ಚಿಂತನೆ ನಡೆಸಿ ಎಂದು ಪ್ರಲ್ಹಾದ ಜೋಶಿ ಸೂಚಿಸಿದರು.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net