

ಹುಬ್ಬಳ್ಳಿ
ಇಲ್ಲಿಯ ರಾಣಿ ಚನ್ನಮ್ಮ ಮೈದಾನದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಅನುಮತಿ ನೀಡಬೇಕೆಂಬ ಬೇಡಿಕೆಯ ಹಿನ್ನೆಲೆಯಲ್ಲಿ ಆ. 25ರಂದು ನಡೆಯಲಿರುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ರ್ಚಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೇಯರ್ ಈರೇಶ ಅಂಚಟಗೇರಿ ತಿಳಿಸಿದರು.
ಇಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಬುಧವಾರ ಗಣೇಶೋತ್ಸವಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ನಂತರ ಅವರು ಮಾತನಾಡಿದರು.
ಈಗಾಗಲೇ ನಾಲ್ಕು ಸಂಘಟನೆಯವರು ಚನ್ನಮ್ಮ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ಕೋರಿದ್ದಾರೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ವಿಚಾರವನ್ನು ಹೆಚ್ಚಿನ ವಿಷಯವಾಗಿ ತೆಗೆದುಕೊಂಡು ರ್ಚಚಿಸಲಾಗುವುದು. ಸಭೆಯ ನಿರ್ಧಾರದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಎಲ್ಲರೂ ಬದ್ಧರಿರಬೇಕು ಎಂದು ಹೇಳಿದರು.
ಇದಕ್ಕೂ ಮುಂಚೆ ಮೇಯರ್ ಕೊಠಡಿಯಲ್ಲಿ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ, ವಿರೋಧ ಪಕ್ಷದ ನಾಯಕರು ಸೇರಿ ಪ್ರಮುಖ ಮುಖಂಡರು ಆಂತರಿಕ ಸಭೆ ನಡೆಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ವಿಷಯವನ್ನು ಸಾಮಾನ್ಯ ಸಭೆಗೆ ಕೊಂಡೊಯ್ಯುವ ಬಗ್ಗೆ ನಿರ್ಧರಿಸಿದ್ದರು.
ಚನ್ನಮ್ಮ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗಾಗಿ ಆಗ್ರಹಿಸಿ ಬುಧವಾರ ಮಧ್ಯಾಹ್ನ ಶ್ರೀರಾಮ ಸೇನೆ, ವಿಎಚ್ಪಿ, ಬಜರಂಗದಳ, ರಾಣಿ ಚನ್ನಮ್ಮ ಮೈದಾನ ಗಜಾನನೋತ್ಸವ ಸಮಿತಿ ಸೇರಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉತ್ಸವ ಸಮಿತಿ ಸಂಚಾಲಕ ಹನಮಂತಸಾ ನಿರಂಜನ ಅವರು, ಚನ್ನಮ್ಮ ಮೈದಾನವು ಮಹಾನಗರ ಪಾಲಿಕೆಯ ಆಸ್ತಿಯಾಗಿದೆ. ಇಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಲು ಯಾವುದೇ ತೊಂದರೆ ಇಲ್ಲ. ನಿರಾಕರಣೆ ಮಾಡಲು ಕಾರಣಗಳೇ ಇಲ್ಲ. ಕೂಡಲೇ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಪಾಲಿಕೆಗೆ ಮೂರು ಬಾರಿ ಮನವಿ ಮಾಡಿದ್ದೇವೆ. ಕೊನೆಯ ಗಡುವು ಸಹ ನೀಡಲಾಗಿದೆ. ಇದೀಗ ಪಾಲಿಕೆ ಸಾಮಾನ್ಯ ಸಭೆಯಲ್ಲಿ ರ್ಚಚಿಸುವುದಾಗಿ ಮೇಯರ್ ಅಂಚಟಗೇರಿ ಅವರು ಹೇಳಿದ್ದಾರೆ. ಸಭೆಯಲ್ಲಿ ಎಲ್ಲ ಸದಸ್ಯರು ಉತ್ಸವಕ್ಕೆ ಅವಕಾಶ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುವ ಭರವಸೆ ಇದೆ. ಒಂದು ವೇಳೆ ಅವಕಾಶ ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ವಿಜಯ ಕಲಬುರ್ಗಿ, ರಮೇಶ ಭೂತೆ, ಮಂಜುನಾಥ ಮೇತ್ರಾಣಿ, ಎಸ್.ವಿ. ಬದ್ದಿ, ವಿವೇಕಾನಂದ ಪವಾರ, ರೋಹಿತ ಹಬೀಬ, ಹನಮಂತಸಾ ಹಬೀಬ, ಗಜಾನನ ಭಾಂಡಗೆ, ನಾಗರಾಜ ಸೋಳಂಕಿ, ಮಂಜು ಮಿಸ್ಕಿನ್ ಇತರರು ಪ್ರತಿಭಟನೆಯಲ್ಲಿದ್ದರು.