

ಬೆಳಗಾವಿ: ಕಿತ್ತೂರಿನಲ್ಲಿ ಅರಮನೆ ಮಾದರಿ ಕಟ್ಟಡ ನಿರ್ಮಾಣ ಮಾಡುವ ಕುರಿತು ಇತಿಹಾಸ ತಜ್ಞರು ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಿದರೆ ನೀಲಿನಕ್ಷೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದ್ದಾರೆ.
ನಗರದ ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಕಿತ್ತೂರು ಅರಮನೆ ಮಾದರಿಯ ಕಟ್ಟಡದ ಪ್ರತಿ ನಿರ್ಮಾಣ ಕುರಿತು ಶುಕ್ರವಾರ ಚರ್ಚಿಸಲು ಹಮ್ಮಿಕೊಂಡಿದ್ದ ಇತಿಹಾಸ ತಜ್ಞರ ಸಭೆಯಲ್ಲಿ ಮಾತನಾಡಿದ ಅವರು, ಕಿತ್ತೂರು ಚನ್ನಮ್ಮ ಅರಮನೆ ಜೀರ್ಣಾವಸ್ಥೆಗೆ ತಲುಪಿದೆ. ಹಾಗಾಗಿ, ಈ ಅರಮನೆಯನ್ನು ಮರುನಿರ್ಮಾಣ ಮಾಡುವ ಪ್ರಯತ್ನಗಳು ಆರಂಭವಾಗಲಿದ್ದು, ಇದಕ್ಕಾಗಿ ತಜ್ಞರ ನೇಮಕಮಾಡಿದ್ದು, ಈ ಸಮಿತಿ ಒಂದು ರೂಪುರೇಷೆ ಸಿದ್ಧಪಡಿಸಲಿದೆ ಎಂದರು. ಕಿತ್ತೂರು ಸಂಸ್ಥಾನಕ್ಕೆ ಗುರುಮಠವಾಗಿದ್ದ ಚೌಕಿಮಠದಿಂದ ಕೆಲಸ ಆರಂಭಿಸಲು ಸಲಹೆಗಳು ಬಂದಿವೆ. ಕಿತ್ತೂರನ್ನು ಒಂದು ಪ್ರವಾಸಿ ತಾಣವಾಗಿ ಗುರುತಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿದೆ. ಈ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡಲು ಸಿದ್ಧರಿದ್ದೇವೆ ಎಂದರು.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶಶಿಧರ ಬಗಲಿ ಮಾತನಾಡಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ 2011-12ರಲ್ಲಿ ರಚನೆಯಾಗಿದ್ದು, ಸರ್ಕಾರವು ಇದಕ್ಕಾಗಿ ವಿಶೇಷ ಅನುದಾನ ಮೀಸಲಿಟ್ಟುಕೊಂಡು ಬರುತ್ತಿದೆ. ಆದರೆ, ಸಮರ್ಪಕ ಯೋಜನೆ ರೂಪಿಸದಿರುವ ಹಿನ್ನೆಲೆಯಲ್ಲಿ ಅನುದಾನ ಸಮರ್ಪಕವಾಗಿ ಬಳಕೆಯಾಗಿಲ್ಲ. ಈಗಾಗಲೇ ಕಿತ್ತೂರು ಅರಮನೆ ಆವರಣದ 20 ಕಾಮಗಾರಿಗಳಿಗೆ ಕ್ರಿಯಾಯೋಜನೆ ರೂಪಿಸಿ, ಪ್ರಸ್ತಾವನೆ ಸಲ್ಲಿಸಲಾಗಿದೆ. ಕಿತ್ತೂರು ಅರಮನೆ ಮರುನವೀಕರಣ ಕಾಮಗಾರಿಯೂ ಇದರಲ್ಲಿ ಸೇರಿದೆ. ಕೋಟೆ ಆಕರ್ಷಣೆ ಹೆಚ್ಚಿಸುವ ಉದ್ದೇಶಕ್ಕಿಂತ ಮೊದಲು ಮೂಲ ಸ್ವರೂಪ ಉಳಿಸುವುದಕ್ಕೆ ಆದ್ಯತೆ ನೀಡಬೇಕಿದೆ ಎಂದರು. ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಎಡಿಸಿ ಅಶೋಕ ದುಡಗುಂಟಿ, ಆರ್‌ಸಿಯು ಕುಲಪತಿ ಡಾ.ರಾಮಚಂದ್ರಗೌಡ, ಹಂಪಿ ವಿವಿ ಪ್ರಾಧ್ಯಾಪಕ ಡಾ.ಅಮರೇಶ ಯಾತಗಲ್, ಪ್ರೊ.ಎಸ್.ಎಂ.ಗಂಗಾಧರಯ್ಯ, ಕುಲಸಚಿವ ಬಸವರಾಜ ಪದ್ಮಶಾಲಿ, ಸ್ಮಿತಾ ಸುರೇಬಾನಕರ್, ಪ್ರೊ. ಆರ್.ಎಂ.
ಷಡಕ್ಷರಯ್ಯ, ವಿದ್ಯಾವತಿ ಭಜಂತ್ರಿ ಇತರರಿದ್ದರು.