

ಹಾಸನ: ಉನ್ನತ ಸಂಸ್ಕಾರದ ನೆಲಗಟ್ಟಿನ ಮೇಲೆ ವ್ಯಕ್ತಿತ್ವ ವಿಕಾಸವಾದಾಗ ಮಾತ್ರ ಸಮಾಜದ ಆರೋಗ್ಯ ಸದೃಢವಾಗಿರುತ್ತದೆ. ಅದರ ಬಲದ ಮೇಲೆ ನಮ್ಮ ಆಧುನಿಕತೆಗೆ ಹಾಗೂ ತಾಂತ್ರಿಕತೆಗೆ ಒಂದು ಅರ್ಥ ಬರುತ್ತದೆ ಎಂದು ವಕೀಲೆ ಎಂ.ಬಿ. ಗಿರಿಜಾಂಬಿಕಾ ಹೇಳಿದರು.
ನಗರದ ಚನ್ನಪಟ್ಟಣದ ಆರಾಧ್ಯ ಯೋಗ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ನಮ್ಮ ನೆಲದ ಕಾನೂನುಗಳನ್ನು ಅರಿತುಕೊಂಡು, ಅಗತ್ಯ ಬಿದ್ದಾಗ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕಾನೂನನ್ನು ದುರುಪಯೋಗಪಡಿಸಿಕೊಳ್ಳದೆ ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿ ಕೌಶಲ ತರಬೇತಿ ಕೇಂದ್ರದ ತರಬೇತುದಾರರಾದ ಪಲ್ಲವಿ ಮಾತನಾಡಿ, ಆರ್ಥಿಕ ಸುಭದ್ರತೆ ಹೆಣ್ಣು ಮಕ್ಕಳಿಗೆ ಬಹಳ ಮುಖ್ಯವಾಗಿದೆ. ಆರ್ಥಿಕ ಸುಭದ್ರತೆಯಿಂದ ತಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದು. ಈ ನಿಟ್ಟಿನಲ್ಲಿ ಮಹಿಳೆಯರು ಪ್ರಯೋಗಶೀಲರಾಗಬೇಕು ಎಂದು ಸಲಹೆ ನೀಡಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಆಯೋಜಿಸಿದ್ದ ವಿವಿಧ ಆಟೋಟಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶೈಲಾ, ತನುಜಾ, ಕವಿತಾ ಮಾಲತೇಶ್, ಕೋರ್ಟ್ ಉದ್ಯೋಗಿ ಗೀತಾ ಇತರರು ಹಾಜರಿದ್ದರು.