

ಹಾಸನ: ಚನ್ನಪಟ್ಟಣ ಉಪಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಶುಕ್ರವಾರ ನಾಮಪತ್ರ ಸಲ್ಲಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರ ಗೆಲುವಿಗಾಗಿ ಹಾಸನ ತಾಯಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಅವರು ಗೆದ್ದೆ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದು ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಹೇಳಿದರು
ಶುಕ್ರವಾರ ಕುಟುಂಬ ಸಮೇತರಾಗಿ ಆಗಮಿಸಿ ಹಾಸನಾಂಬೆ ದೇವಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲೇ ನಿಖಿಲ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕೆಂದುಕೊಂಡಿದ್ದರೆ ಎಚ್.ಡಿ.ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿದ ದಿನವೇ ನಿಖಿಲ್ ಅವರೇ ಅಭ್ಯರ್ಥಿ ಎಂದು ಘೋಷಣೆ ಮಾಡುತ್ತಿದ್ದೇವು. ಕೊನೆಯ ಗಳಿಗೆ ವರೆಗೂ ಕಾಯುವ ಅಗತ್ಯ ಇರಲಿಲ್ಲ ಎಂದರು.
ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಗೆದ್ದೆ ಗೆಲ್ಲುತ್ತಾರೆಂದು ಆತ್ಯಂತ ಆತ್ಮವಿಶ್ವಾಸದಿಂದ ಹೇಳುತ್ತೇನೆ. ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿದ ನಂತರ ನಿಖಿಲ್ ಅವರು ಕ್ಷೇತ್ರದ ಜನರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಜೊತೆಗೆ ದೇವೇಗೌಡರೇ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. ಇಂದು ನಿಖಿಲ್ ಅವರು ನಾಮಪತ್ರ ಸಲ್ಲಿಸಿದ್ದಾರೆ, ಅವರಿಗೆ ಜಯವಾಗಲಿ ಎಂದು ಹಾಸನಾಂಬೆ ದೇವಿಯಲ್ಲಿ ಪ್ರಾರ್ಥಿಸಿದ್ದಾನೆ. ದೇವೇಗೌಡರನ್ನು ಚನ್ನಪಟ್ಟಣದ ಜನರು ಅತ್ಯಂತ ಪ್ರೀತಿಯಿಂದ ಕಾಣುವುದರಿಂದ ನಿಖಿಲ್ ಅವರನ್ನು ಗೆಲ್ಲಿಸುವ ವಿಶ್ವಾಸವಿದೆ. ದೇವೇಗೌಡರೇ ನಿಖಿಲ್ ಅವರಿಗೆ ಧೈರ್ಯತುಂಬಿ ಸ್ಪರ್ಧಿಸಬೇಕೆಂಬ ಸೂಚನೆ ಮೇರೆಗೆ ಕಣದಲ್ಲಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಕಾರ್ಯಕರ್ತರು ಯೋಗೇಶ್ವರ್ ಅವರ ಪರ ಕೆಲಸ ಮಾಡಲು ಸಿದ್ಧರಿದ್ದರು. ಕುಮಾರಸ್ವಾಮಿ ಆಗಲಿ ನಾವಾಗಲಿ ಅಗೌರವ ತೋರಿಲ್ಲ. ಕಾಂಗ್ರೆಸ್ ಸೇರುವ ಉದ್ದೇಶದಿಂದಲೇ ನಮ್ಮ ವಿರುದ್ಧವಾದ ಹೇಳಿಕೆಗಳನ್ನು ನೀಡುತ್ತಿದ್ದರು. ಈ ಬಾರಿ ಚನ್ನಪಟ್ಟಣ ಜನರು ಯೋಗೇಶ್ವರ್ ಅವರಿಗೆ ಬುದ್ಧಿ ಕಲಿಸುತ್ತಾರೆ ತಿಳಿಸಿದರು.
ಸೋಲುವಾಗ ಕಾರ್ಯಕರ್ತರನ್ನು, ಗೆಲ್ಲುವಾಗ ದೇವೇಗೌಡರ ಕುಟುಂಬದವರನ್ನು ನಿಲ್ಲಿಸುತ್ತಾರೆ ಎಂಬ ಕಳಂಕ ನಮ್ಮ ಪಕ್ಷದ ಮೇಲೆ ವಿರೋಧ ಪಕ್ಷದ ಮೇಲೆ ಹೊರಿಸಿಕೊಂಡೇ ಬಂದಿದ್ದಾರೆ. ಆ ಅಪವಾದ ದೂರ ಮಾಡಲೆಂದೆ ಸಿ.ಪಿ.ಯೋಗೇಶ್ವರ್ ಅವರಿಗೆ ಸ್ಪರ್ಧೆ ಮಾಡುವಂತೆ ಹೇಳಲಾಗಿತ್ತು. ಜೆಡಿಎಸ್ ಚಿಹ್ನೆಯಡಿ ಸ್ಪರ್ಧೆ ಮಾಡಿ ಎಂದರೂ ಆಗುವುದಿಲ್ಲ ಎಂದರು. ಅದಕ್ಕಾಗಿಯೇ ಹೆಚ್.ಡಿ.ಕುಮಾರಸ್ವಾಮಿ ಅವರು ನೆಲದವರೆಗೂ ಬಗ್ಗಿದ್ದೇನೆ ಎಂಬ ಹೇಳಿಕೆ ನೀಡಿದ್ದಾರೆ. ಎನ್‌ಡಿಎ ಅಭ್ಯರ್ಥಿ ಆಗಲು ಅವಕಾಶ ಕೊಡಲಿಲ್ಲ ಎಂದು ಯೋಗೇಶ್ವರ್ ಹೇಳುತ್ತಾರೆ, ಹಾಗಾದರೆ, ಏಕೆ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಅಭ್ಯರ್ಥಿ ಘೋಷಣೆಗೆ ಮೊದಲೇ ಒಂದು ಕಾಲನ್ನು ಕಾಂಗ್ರೆಸ್‌ನಲ್ಲಿ ಇಟ್ಟಿದ್ದರು ಎಂದು ಪ್ರಶ್ನಿಸಿದರು.
ನಿಖಿಲ್ ಪರ ಬಿಜೆಪಿ ಮುಖಂಡರು ಕೆಲಸ ಮಾಡುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲಾ ಪಕ್ಷದಲ್ಲೂ ಕಳ್ಳರಿದ್ದಾರೆ, ಎಲ್ಲಾ ಪಕ್ಷದಲ್ಲೂ ಹೊಂದಾಣಿಕೆ ರಾಜಕೀಯ ಇದೆ. ಆದರೆ ಕಾರ್ಯರ್ತರ ಭಾವನೆಯಲ್ಲಿ ವ್ಯತ್ಯಾಸವಾಗುವುದಿಲ್ಲ. ಈ ಬಾರಿ ಚನ್ನಪಟ್ಟಣದಲ್ಲಿ ಕಾರ್ಯಕರ್ತರು ನಿಖಿಲ್ ಪರ ಇದ್ದಾರೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.