ಚನ್ನಗಿರಿ ಬಸ್ ಡಿಪೋ ಡಿಸೆಂಬರ್‌ಗೆ ಲೋಕಾರ್ಪಣೆ

chn aug 14 ksrtc (3)
Published on

ಚನ್ನಗಿರಿ: ತಾಲೂಕಿನ ಅಜ್ಜಿಹಳ್ಳಿ ಗ್ರಾಮದ ಬಳಿ ರಾಜ್ಯ ರಸ್ತೆ ಸಾರಿಗೆ ನಿಗಮದ ಸಹಯೋಗದಲ್ಲಿ ನಿರ್ಮಾಣ ಹಂತದಲ್ಲಿರುವ ಬಸ್ ಘಟಕದ ಕಾಮಗಾರಿ ಡಿಸೆಂಬರ್ ವೇಳೆಗೆ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿ.ಈ.ಶ್ರೀನಿವಾಸ್ ಮೂರ್ತಿ ಪತ್ರಿಕೆಗೆ ತಿಳಿಸಿದ್ದಾರೆ.
ಅಜ್ಜಿಹಳ್ಳಿ ಗ್ರಾಮ ವ್ಯಾಪ್ತಿಯ ಚಿಕ್ಕೂಲಿಕೆರೆ ಗ್ರಾಮದ ಸರ್ವೆ ನಂ 103ರಲ್ಲಿ 4 ಎಕರೆ ವಿಸ್ತೀರ್ಣದಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಘಟಕ ನಿರ್ಮಾಣ ಹಂತದಲ್ಲಿದೆ. ಈಗಾಗಲೇ ಬಸ್‌ಗಳ ನಿರ್ವಹಣೆ ಅಂಕಣ, ಪರಿವೀಕ್ಷಣಾ ಅಂಕಣ, ಭದ್ರತಾ ಮತ್ತು ಸಂಚಾರ ಶಾಖೆ ಕಟ್ಟಡದ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಉಳಿದ ಕಾಮಾಗಾರಿ ತ್ವರಿತವಾಗಿ ಪೂರ್ಣಗೊಳ್ಳಲಿವೆ. ಉಳಿದ ಕೆಲವೇ ತಿಂಗಳಲ್ಲಿ ಪೂರ್ಣಗೊಂಡು ಜನೆ ಸೇವೆಗೆ ಸಿಗಲಿದೆ ಎಂದು ತಿಳಿಸಿದ್ದಾರೆ.
ಬಸ್‌ಗಳ ನಿರ್ವಹಣೆ ಅಂಕಣ, ಪರಿವೀಕ್ಷಣಾ ಅಂಕಣ, ಭದ್ರತಾ ಮತ್ತು ಸಂಚಾರ ಶಾಖೆ, ಮಹಿಳಾ ಸಿಬ್ಬಂದಿ ವಿಶ್ರಾಂತಿ ಗೃಹ, ಶೌಚಲಯ, ಜನರೇಟರ್ ಕೊಠಡಿ, ಇಂಧನ ಕೊಠಡಿ, ವಾಷಿಂಗ್ ರ‌್ಯಾಂಪ್, ಕೊಳವೆ ಬಾವಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಡಿಪೋ ಆಗುವುದರಿಂದ ಚನ್ನಗಿರಿಯಿಂದ ಶಿವಮೊಗ್ಗ, ದಾವಣಗೆರೆ, ಭದ್ರಾವತಿ, ಚಿತ್ರದುರ್ಗ, ಹೊಳೆಲ್ಕೆರೆ, ಅಜ್ಜಂಪುರ, ಚಿಕ್ಕಮಗಳೂರು ಸೇರಿದಂತೆ ಗ್ರಾಮ ಹಾಗೂ ಪಟ್ಟಣಗಳಿಗೆ ಸಂಪರ್ಕ ನೇರವಾಗಿ ಸಿಗಲಿದೆ ಎಂದರು.

ಡಿಪೋ ನಿರ್ಮಾಣಗೊಂಡರೆ ಈಗಿರುವ ಬಸ್ಸುಗಳ ಜತೆಯಲ್ಲಿ ಇನ್ನೂ 50 ಬಸ್ ಹೊಸದಾಗಿ ಬಿಡುವ ಸಾಧ್ಯತೆ ಇದ್ದು, ಸುಮಾರು 250ಕ್ಕೂ ಹೆಚ್ಚು ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಸಿದ್ಧತೆ ಮಾಡಲಾಗಿದೆ. ಡಿಪೋ ಪ್ರಾರಂಭವಾದರೆ ಶುಭ ಸಮಾರಂಭಗಳಿಗೆ ಜನರು ನಗರ ಪ್ರದೇಶಗಳಿಗೆ ಹೋಗಿ ಬಸ್ ಬುಕ್ಕಿಂಗ್ ಮಾಡುವುದು ತಪ್ಪುತ್ತದೆ. ಎಲ್ಲ ಸೇವೆಗಳನ್ನು ಇಲ್ಲಿಯೇ ಪಡೆದುಕೊಳ್ಳಬಹುದು.
ಸಿ.ಈ.ಶ್ರೀನಿವಾಸ್ ಮೂರ್ತಿ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net