ಚನ್ನಕೇಶವನ ಸನ್ನಿಧಿಯಲ್ಲಿ ಯೋಗ

21blrp6
ವಿಶ್ವ ಯೋಗ ದಿನದ ಅಂಗವಾಗಿ ಚನ್ನಕೇಶವಸ್ವಾಮಿ ದೇಗುಲದ ಒಳ ಆವರಣದಲ್ಲಿ ಯೋಗ ಮಾಡಿದ ಗಣ್ಯರು ಮತ್ತು ವಿದ್ಯಾರ್ಥಿಗಳು.
Published on

ಬೇಲೂರು: ತಾಲೂಕು ಆಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ಪುರಸಭೆ, ರಾಘವೇಂದ್ರ ಹಾಗೂ ಪತಂಜಲಿ ಯೋಗ ಕೇಂದ್ರಗಳ ಸಹಯೋಗದೊಂದಿಗೆ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದ ಒಳಾವರಣದಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಬುಧವಾರ ವಿದ್ಯಾರ್ಥಿಗಳು ಮತ್ತು ಯೋಗಪಟುಗಳು ಯೋಗಾಸನ ಮಾಡುವ ಮೂಲಕ ವಿಶ್ವ ಯೋಗ ದಿನ ಆಚರಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಚ್.ಕೆ.ಸುರೇಶ್, ಅನಾದಿ ಕಾಲದಿಂದಲೂ ಋಷಿ ಮುನಿಗಳು ಯೋಗ ಮಾಡುತ್ತಿದ್ದುದರಿಂದ ಅವರಲ್ಲಿ ತಾಳ್ಮೆ, ಬುದ್ಧಿಶಕ್ತಿ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ 9 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಯೋಗ ದಿನ ಆಚರಿಸಲು ಕರೆಕೊಟ್ಟರು. ಆದರೆ ಈ ಯೋಗವನ್ನು ಒಂದು ದಿನಕ್ಕೆ ಸೀಮಿತ ಮಾಡದೆ ಪ್ರತಿನಿತ್ಯ ಮಾಡುವಂತಾದಾಗ ಮಾತ್ರ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಇಂದಿನ ಒತ್ತಡದ ಜೀವನದಲ್ಲಿ ಆಹಾರ ಪದ್ಧತಿಯಿಂದ ಹಲವು ಸಮಸ್ಯೆ ಎದುರಿಸುತ್ತಿದ್ದೇವೆ. ಇದನ್ನು ತೊಡೆದು ಹಾಕಬೇಕಿದ್ದರೆ ಯೋಗ ಅತ್ಯಗತ್ಯ. ಆದ್ದರಿಂದ ಪ್ರತಿಯೊಬ್ಬರೂ ಯೋಗ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕು ಎಂದರು.

ಯೋಗ ದಿನಾಚರಣೆಯಲ್ಲಿ ತಹಸೀಲ್ದಾರ್ ಎಂ.ಮಮತಾ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್, ಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ವಲಯ ಅರಣ್ಯಾಧಿಕಾರಿ ವಿನಯ್‌ಕುಮಾರ್, ತಾಪಂ ಸಹಾಯಕ ನಿರ್ದೇಶಕ ಗುರುಪ್ರಸಾದ್, ರಾಘವೇಂದ್ರ, ಪತಂಜಲಿ ಯೋಗ ಕೇಂದ್ರ ಮತ್ತು ವಿವಿಧ ಶಾಲೆಗಳ ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net