

ಚಿತ್ರದುರ್ಗ: ಕೆಳಗೋಟೆಯ ಸಿ.ಕೆ.ಪುರ ಬಡಾವಣೆಯಲ್ಲಿರುವ ಚನ್ನಕೇಶವ ಸ್ವಾಮಿ ಮಹಾರಥೋತ್ಸವ ಶ್ರೀದೇವಿ, ಭೂದೇವಿ ಸಹಿತ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ಜರುಗಿತು.
ಸ್ವಾಮಿ, ದೇವಿಯರ ಉತ್ಸವ ಮೂರ್ತಿಗಳಿಗೆ ವಿವಿಧ ಬಗೆಯ ಪುಷ್ಪಗಳಿಂದ ಅಲಂಕಾರ ಸೇವೆ ನೆರವೇರಿತು. ನಂತರ ಮಂಗಳವಾದ್ಯ ಸಮೇತ ರಥದ ಬಳಿಗೆ ಕರೆತಂದು ಅದರೊಳಗೆ ಪ್ರತಿಷ್ಠಾಪಿಸಲಾಯಿತು. ಸುತ್ತಲೂ ಹೂವಿನ ಹಾರಗಳಿಂದ ಸಿಂಗರಿಸಲಾಗಿತ್ತು. ನೆರೆದಿದ್ದ ಭಕ್ತಗಣ ತೇರನ್ನು ಎಳೆದು ಭಕ್ತಿ ಸಮರ್ಪಿಸಿದರು.
ರಥ ಮುಂದೆ ಸಾಗಿದ್ದೆ ತಡ ದಾಸಯ್ಯ ತಂಡದವರು ಗಂಟೆ, ಜಾಗಟೆ, ಶಂಖನಾದ ಮೊಳಗಿಸಿದರು. ರಥೋತ್ಸವ ಕಣ್ತುಂಬಿಕೊಂಡ ಭಕ್ತರು ಮಂಡಕ್ಕಿ, ಪುಷ್ಪವನ್ನು ರಥಕ್ಕೆ ಎಸೆದು ಸ್ವಾಮಿಯ ದರ್ಶನ ಪಡೆದು ಪುನೀತರಾದರು.
ಕೆಳಗೋಟೆ, ಸಿ.ಕೆ.ಪುರ ಬಡಾವಣೆ, ಆಕಾಶವಾಣಿ ಸೇರಿ ಸುತ್ತಮುತ್ತಲಿನ ಭಕ್ತರು ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ನಂತರ ನಡೆದ ಅನ್ನಸಂತರ್ಪಣೆಯಲ್ಲಿ ಪ್ರಸಾದ ಸ್ವೀಕರಿಸಿದರು.
ದೇಗುಲದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯ ನೆರವೇರಿದವು. ದೇಗುಲಕ್ಕೂ ಭೇಟಿ ನೀಡಿದ ಭಕ್ತರು ದರ್ಶನ ಪಡೆದು ಇಷ್ಟಾರ್ಥ ಈಡೇರಿಕೆಗಾಗಿ ಪ್ರಾರ್ಥಿಸಿಕೊಂಡರು.