ಚಂದ್ರಶೇಖರನ್ ಕುಟುಂಬಕ್ಕೆ ಈಶ್ವರಪ್ಪ ಧನಸಹಾಯ

kse
ಚಂದ್ರಶೇಖರನ್ ಪತ್ನಿ ಕವಿತಾ ಅವರಿಗೆ ಕೆ.ಎಸ್.ಈಶ್ವರಪ್ಪ 5 ಲಕ್ಷ ರೂ.ಗಳ ಆರ್ಥಿಕ ನೆರವು ನೀಡಿದರು. ಕೆ.ಇ.ಕಾಂತೇಶ್, ಲಕ್ಷ್ಮೀ ಶಂಕರನಾಯ್ಕ, ಇ.ವಿಶ್ವಾಸ್, ಸುವರ್ಣಾ ಶಂಕರ್, ಬಾಲು, ಸೀತಾಲಕ್ಷ್ಮೀ, ಭೂಪಾಲ ಮುಂತಾದವರಿದ್ದರು.
Published on

ಶಿವಮೊಗ್ಗ: ಕೆಲ ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಕುಟುಂಬಕ್ಕೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸಹಾಯಹಸ್ತ ಚಾಚಿದ್ದಾರೆ. ಆ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ನೀಡುವ ಮೊದಲೇ ಈಶ್ವರಪ್ಪ ರಾಷ್ಟ್ರಭಕ್ತರ ಬಳಗದ ಮೂಲಕ ಧನಸಹಾಯ ಮಾಡಿದ್ದಾರೆ.

ರಾಷ್ಟ್ರಭಕ್ತರ ಬಳಗದ ಸಂಚಾಲಕರೂ ಆಗಿರುವ ಈಶ್ವರಪ್ಪ, ಶನಿವಾರ ಚಂದ್ರಶೇಖರನ್ ಅವರ ವಿನೋಬನಗರ ನಿವಾಸಕ್ಕೆ ತೆರಳಿ ಪತ್ನಿ ಕವಿತಾ ಅವರಿಗೆ ಐದು ಲಕ್ಷ ರೂ. ನೀಡಿ ಸಮಾಧಾನ ಹೇಳಿದರು. ನಿಮ್ಮ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಭರವಸೆ ನೀಡಿದರು.
ಕೆ.ಎಸ್.ಈಶ್ವರಪ್ಪ ಮಾತನಾಡಿ, ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡ ಕಾರಣಕ್ಕಾಗಿಯೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಬೆಳಕಿಗೆ ಬಂದಿದೆ. ಆ ಕುಟುಂಬ ಆರ್ಥಿಕವಾಗಿ ತೊಂದರೆಯಲ್ಲಿದ್ದರೂ ಸ್ವಾಭಿಮಾನಿಯಾಗಿದೆ. ಕುಟುಂಬಕ್ಕೆ ಸರ್ಕಾರ ಘೋಷಿಸಿರುವ 25 ಲಕ್ಷ ರೂ. ಪರಿಹಾರವನ್ನು ಕೂಡಲೇ ಕೊಡಬೇಕೆಂದು ಆಗ್ರಹಿಸಿದರು.
ರಾಜ್ಯ ಸರ್ಕಾರದ ವರ್ತನೆಯಿಂದ ನಾನು ತುಂಬಾ ನೊಂದು ಮಾತನಾಡಬೇಕಾಗಿದೆ. ಚಂದ್ರಶೇಖರನ್ ಆತ್ಮಹತ್ಯೆಗೆ ಶರಣಾಗಿದ್ದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಇಲ್ಲಿಗೆ ಬಂದು ಕುಟುಂಬಕ್ಕೆ ಸಾಂತ್ವನ ಹೇಳಿ ನ್ಯಾಯ ಒದಗಿಸುವ ಭರವಸೆ ನೀಡಬೇಕಿತ್ತು. ಹಗರಣದ ರೂವಾರಿ ಸಚಿವ ಬಿ.ನಾಗೇಂದ್ರ ಇವತ್ತು ಜೈಲಿನಲ್ಲಿದ್ದಾರೆ. ಸರ್ಕಾರ ಇನ್ನೂ ಸಹಾಯ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶೀಘ್ರದಲ್ಲೇ ಈ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆಂದು ಶಿವಮೊಗ್ಗ ಕ್ಷೇತ್ರದ ಶಾಸಕರು ಹೇಳಿದ್ದಾರೆ. ಹೀಗಾಗಿ ಸೆ.20ರಂದು ರಾಷ್ಟ್ರಭಕ್ತರ ಬಳಗದಿಂದ ಹಮ್ಮಿಕೊಳ್ಳಲಾಗಿದ್ದ ಜೈಲ್ ಭರೋ ಚಳವಳಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಮಾಜಿ ಮೇಯರ್ ಸುವರ್ಣಾ ಶಂಕರ್, ಮಾಜಿ ಉಪಮೇಯರ್ ಲಕ್ಷ್ಮೀ ಶಂಕರನಾಯ್ಕ, ಪಾಲಿಕೆ ಮಾಜಿ ಸದಸ್ಯರಾದ ಆಶಾ ಚನ್ನಬಸಪ್ಪ, ಇ.ವಿಶ್ವಾಸ್, ಪ್ರಮುಖರಾದ ಮೋಹನ್‌ಕುಮಾರ್ ಜಾಧವ್, ಬಾಲು, ಭೂಪಾಲ, ಸೀತಾಲಕ್ಷ್ಮೀ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net