

ಸಕಲೇಶಪುರ: ರಾಷ್ಟ್ರಿಯ ಹೆದ್ದಾರಿ- 75ರ ಚತುಷ್ಪಥ ಕಾಮಗಾರಿಯಿಂದಾಗಿ ನರಕವಾಗಿದ್ದ ಸಕಲೇಶಪುರ-ಹಾಸನದ ನಡುವಿನ ಸಂಚಾರ ಸತತ ಆರು ವರ್ಷಗಳ ನಂತರ ಸುಗುಮವಾಗುವ ಹಂತ ತಲುಪಿದೆ.
ಹಾಸನ ಹೊರವರ್ತುಲ ರಸ್ತೆಯಿಂದ ಸಕಲೇಶಪುರ ತಾಲೂಕಿನ ಹೆಗ್ಗದ್ದೆ ಗ್ರಾಮದ ಹೊರವಲಯದವರೆಗಿನ 45 ಕಿ.ಮೀ. ಚತುಷ್ಪಥ ನಿರ್ಮಾಣಕ್ಕೆ 2016 ರಲ್ಲಿ ಟೆಂಡರ್ ಕರೆದು, 2019 ರ ಏಪ್ರಿಲ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಕಾಮಗಾರಿ ಕೈಗೆತ್ತಿಕೊಂಡ ಐಸೋಲೆಕ್ಸ್ ಕಂಪನಿ ಯಾವುದೇ ಮುಂದಾಲೋಚನೆ ಇಲ್ಲದೆ ತುಂಡು ಗುತ್ತಿಗೆ ನೀಡುವ ಮೂಲಕ 45 ಕಿ.ಮೀ. ರಸ್ತೆಯ ಎರಡೂ ಕಡೆಯ ಮಣ್ಣು ತೆಗೆದ ಪರಿಣಾಮ ಹಲವೆಡೆ ಭೂಕುಸಿತಕ್ಕೆ ಕಾರಣವಾಗಿತ್ತು.
ಚತುಷ್ಪಥ ಕಾಮಗಾರಿ ಆರಂಭವಾದ ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ರಸ್ತೆ ನಿರ್ವಹಣೆ ಕೈಬಿಟ್ಟಿತ್ತು. ಇತ್ತ ರಸ್ತೆ ನಿರ್ಮಾಣದ ಗುತ್ತಿಗೆದಾರರು ನಿರ್ವಹಣೆಯ ಹೊಣೆಯಿಂದ ನುಣುಚಿಕೊಂಡ ಪರಿಣಾಮ 45 ಕಿ.ಮೀ. ರಸ್ತೆಯಲ್ಲಿ ಹೊಂಡಗಳು ಬಿದ್ದು ವಾಹನ ಸಂಚಾರ ತ್ರಾಸದಾಯಕವಾಗಿತ್ತು. ಪರಿಣಾಮ ಹಾಸನದಿಂದ ಸಕಲೇಶಪುರದವರಗಿನ 40 ಕಿ.ಮೀ ಸಂಚಾರಕ್ಕೆ ಎರಡು ಗಂಟೆಗಳ ಸಮಯ ಹಿಡಿಯುತ್ತಿದ್ದರಿಂದ ಹೆದ್ದಾರಿಯಲ್ಲಿ ಸಂಚರಿಸುವ ಪ್ರತಿಯೊಬ್ಬರು ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿತ್ತು.
ಹೆದ್ದಾರಿಯಲ್ಲಿ ನಿರ್ಮಾಣವಾಗಿದ್ದ ಹೊಂಡಗಳನ್ನು ಮುಚ್ಚಲು ಆಗ್ರಹಿಸಿ ಜನಪರ ಸಂಘಟನೆಗಳು ಬೃಹತ್ ಪ್ರತಿಭಟನೆಗಳನ್ನೇ ನಡೆಸ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ಕಾಮಗಾರಿ ಕೈಗೆತ್ತಿಕೊಂಡಿರುವ ರಾಜ್‌ಕಮಲ್ ಕಂಪನಿಗೆ ನೀಡಿರುವ ಗುತ್ತಿಗೆ ಅವಧಿ 2023 ಮಾರ್ಚ್ ಅಂತ್ಯಕ್ಕೆ ಕೊನೆಗಾಣಲಿರುವುದರಿಂದ ಕನಿಷ್ಠ ಸಕಲೇಶಪುರದವರೆಗೆ ಚತುಷ್ಪಥ ಕಾಮಗಾರಿ ಮುಗಿಯುವ ಲಕ್ಷಣ ಕಾಣಿಸುತ್ತಿದೆ. ಸಕಲೇಶಪುರ-ಹಾಸನ ನಡುವೆ ಶೇ.80 ರಷ್ಟು ಕಾಮಗಾರಿ ಮುಕ್ತಾಯಗೊಂಡಿದ್ದು ತಾಲೂಕಿನ ಕೊಲ್ಲಹಳ್ಳಿ ಹಾಗೂ ರಾಟೇಮನೆ ಸಮೀಪದ ಎರಡು ಕಿ.ಮೀ. ಕಾಮಗಾರಿ ಭರದಿಂದ ನಡೆಯುತ್ತಿದೆ. ಇನ್ನೊಂದು ತಿಂಗಳಿನಲ್ಲಿ ಈ ಎರಡು ಕಿ.ಮೀ. ರಸ್ತೆ ಸಾರ್ವಜನಿಕ ಸಂಚಾರಕ್ಕೆ ತೆರವಾಗುವ ಭರವಸೆಯನ್ನು ಅಧಿಕಾರಿಗಳು ಹೊಂದಿದ್ದಾರೆ. ಈ ಕಾಮಗಾರಿ ಹೊರತುಪಡಿಸಿ ಬಹುತೇಕ ರಸ್ತೆ ಕಾಂಕ್ರೀಟೀಕರಣಗೊಂಡಿರುವುದರಿಂದ ವಾಹನ ಸವಾರರು ಸಂತೋಷಗೊಳ್ಳುವಂತಾಗಿದೆ.
ಅವೈಜ್ಞಾನಿಕ ಕಾಮಗಾರಿ:
ಮಳೆಗಾಲದ ನಂತರ ಕಾಮಗಾರಿ ವೇಗಗೊಳಿಸಿರುವ ಕಂಪನಿ ತಗ್ಗುಪ್ರದೇಶಗಳಿಗೆ ಮಣ್ಣು ಹಾಕಿ ತಕ್ಷಣವೇ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುತ್ತಿದ್ದು ಮುಂದಿನ ಮಳೆಗಾಲದಲ್ಲಿ ತಗ್ಗುಪ್ರದೇಶದ ಮಣ್ಣು ಕುಸಿಯುವುದರಿಂದ ರಸ್ತೆ ಹಾನಿಗೊಳಗಾಗುವ ಸಾಧ್ಯತೆ ಇದೆ. ಆದರೆ ಈ ಅವೈಜ್ಞಾನಿಕ ಕಾಮಗಾರಿ ಆರೋಪಕ್ಕೆ ಗುತ್ತಿಗೆದಾರ ಸಂಸ್ಥೆ ಕಿವುಡಾಗಿದೆ.
ದೊರಕದ ಪರಿಹಾರ:
ರಾಜ್‌ಕಮಲ್ ಕಂಪನಿ ಹಾಸನದಿಂದ ಸಕಲೇಶಪುರದವರೆಗೆ ಚತುಷ್ಪಥ ಹಾಗೂ ಸಕಲೇಶಪುರದಿಂದ ಹೆಗದ್ದೆ ಗ್ರಾಮದವರಗಿನ 10 ಕಿ.ಮೀ ದ್ವಿಪಥ ನಿರ್ಮಾಣ ಯೋಜನೆಗೆ ಸಹಿ ಹಾಕಿತ್ತು. ಆದರೆ, ಕಣಿವೆ ಪ್ರದೇಶದಲ್ಲಿನ ರಸ್ತೆ ನಿರ್ಮಾಣಕ್ಕೆ ಇದುವರೆಗೆ ಕೈಹಾಕದ ಕಂಪನಿಯ ಮುಂದಿನ ನಡೆ ಕಾದು ನೋಡಬೇಕಿದೆ. ಕನಿಷ್ಠ 10 ಕಿ.ಮೀ. ರಸ್ತೆ ನಿರ್ವಹಣೆ ಕೈಬಿಟ್ಟಿರುವ ಪರಿಣಾಮ ಹೊಂಡಗಳಿಂದಲೇ ತುಂಬಿರುವ ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ. ಇದಲ್ಲದೆ ಹೆದ್ದಾರಿ ಇಂಜನಿಯರ್‌ಗಳ ಅವೈಜ್ಞಾನಿಕ ಕಾಮಗಾರಿಯಿಂದ ತಾಲೂಕಿನ ದೋಣಿಗಾಲ್ ಗ್ರಾಮ ಸಮೀಪ ಕೃತಕವಾಗಿ ನಿರ್ಮಾಣವಾಗಿದ್ದ ಕೆರೆ ಒಡೆದು 50 ಎಕರೆಗೂ ಹೆಚ್ಚಿನ ಕಾಫಿ, ಅಡಿಕೆ ಹಾಗೂ ಭತ್ತದ ಗದ್ದೆಗಳು ನಾಶವಾಗಿದ್ದು ಜಿಲ್ಲಾಡಳಿತ ಗುತ್ತಿಗೆದಾರರಿಂದ ಪರಿಹಾರ ಕೊಡಿಸುವ ಭರವಸೆ ನೀಡಿತ್ತು. ಆದರೆ, ಇದುವರೆಗೆ ಯಾವುದೇ ಪರಿಹಾರ ನೀಡದ ಕಾರಣ ಹಾನಿಗೊಳಗಾದ ಭೂ ಪ್ರದೇಶದ ಮಾಲೀಕರು ಹೆದ್ದಾರಿ ಕಾಮಗಾರಿ ನಡೆಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.
25 ಕೋಟಿ ರೂ. ಅನುದಾನಕ್ಕೆ ಬೇಡಿಕೆ:
ಸಕಲೇಶಪುರದಿಂದ ಹೆಗದ್ದೆ ಗ್ರಾಮದವರೆಗೆ 10 ಕಿ.ಮೀ ರಸ್ತೆಯ ಹೊಂಡಗಳನ್ನು ಮುಚ್ಚಿ ಡಾಂಬರು ಹಾಕಲು 25 ಕೋಟಿ ರೂ. ಅನುದಾನಕ್ಕೆ ಬೇಡಿಕೆ ಇಡಲಾಗಿದೆ ಎಂಬ ವಿಷಯ 15 ದಿನಗಳ ಹಿಂದೆ ಸಂಸದ ಪ್ರಜ್ವಲ್ ರೇವಣ್ಣ ಅಧ್ಯಕ್ಷತೆಯಲ್ಲಿ ತಾಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ತಿಳಿದು ಬಂದಿತು. ಆದರೆ ಇಷ್ಟೊಂದು ಮೊತ್ತ ಏಕೆ ಎಂಬ ಅಪಸ್ವರ ಸಭೆಯಲ್ಲಿ ವ್ಯಕ್ತವಾಯಿತು.
ವಾಹನಗಳ ಸಂಖ್ಯೆ ಕುಸಿತ:
ಹೆದ್ದಾರಿ ತೀರ ಹದಗೆಟ್ಟಿರುವ ಕಾರಣದಿಂದ ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ಸಾಕಷ್ಟು ಲಘುವಾಹನಗಳು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಮಾರ್ಗದಲ್ಲಿ ಸಂಚರಿಸುವುದನ್ನು ಕಡಿಮೆ ಮಾಡಿವೆ. ಹೆಚ್ಚಿನ ವಾಹನಗಳು ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಸಂಚರಿಸಲಾರಂಭಿಸಿವೆ. ಹಾಗಾಗಿ ಈ ಮಾರ್ಗದಲ್ಲಿರುವ ಹೋಟೆಲ್‌ಗಳಲ್ಲಿ ವ್ಯಾಪಾರ ಕುಂಠಿತಗೊಂಡಿದೆ.
‘‘ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಹಾಸನದಿಂದ ಸಕಲೇಶಪುರ ವರೆಗಿನ 45 ಕಿ.ಮೀ. ಚತುಷ್ಪಥ ನಿರ್ಮಾಣ ಕಾಮಗಾರಿ ಮಾರ್ಚ್ ವೇಳೆಗೆ ಮುಗಿಯುವ ನಿರೀಕ್ಷೆ ಇದೆ. ಸಕಲೇಶಪುರದಿಂದ ಮುಂದಕ್ಕೆ ಸಹ ಕಾಮಗಾರಿ ವೇಗವನ್ನು ಚುರುಕುಗೊಳಿಸಲಾಗುವುದು.’’
ಬಾಷಾ, ವ್ಯವಸ್ಥಾಪಕ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹಾಸನ.