ಚತುಷ್ಪಥ ಕಾಮಗಾರಿ ಪೂರ್ಣ ಮಾಹಿತಿ ನೀಡಿ: ಪ್ರಜ್ವಲ್ ರೇವಣ್ಣ

ಚತುಷ್ಪಥ ಕಾಮಗಾರಿ ಪೂರ್ಣ ಮಾಹಿತಿ ನೀಡಿ: ಪ್ರಜ್ವಲ್ ರೇವಣ್ಣ
Published on

ಹಾಸನ: ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಹಾಸನದಿಂದ ಸಕಲೇಶಪುರದವರೆಗಿನ ಚತುಷ್ಪಥ ಕಾಮಗಾರಿಯ ಅನುದಾನ ಮತ್ತು ವೆಚ್ಚದ ಪೂರ್ಣ ಮಾಹಿತಿ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಂಸದ ಪ್ರಜ್ವಲ್ ರೇವಣ್ಣ ತಾಕೀತು ಮಾಡಿ ಒಂದು ವಾರದ ಗಡುವು ನೀಡಿದರು.


ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಾಸನ-ಸಕಲೇಶಪುರ ಚುತುಷ್ಪಥ ಹೆದ್ದಾರಿ ಕಾಮಗಾರಿ ಮುಂದಿನ ಮಾರ್ಚ್ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಶೇ.90 ರಷ್ಟು ಮಾತ್ರ ಕಾಮಗಾರಿ ಆಗಿದೆ. ಆ ಕಾಮಗಾರಿಗೆ ಇದುವರೆಗೆ ಎಷ್ಟು ವೆಚ್ಚವಾಗಿದೆ ಎಂಬ ಪೂರ್ಣ ವಿವರ ಒಂದು ವಾರದಲ್ಲಿ ತಮ್ಮ ಮುಂದಿರಬೇಕೆಂದು ಆದೇಶಿಸಿದರು.


ಸಕಲೇಶಪುರದಿಂದ ಮುಂದಕ್ಕೆ ಹೆಗ್ಗದ್ದೆವರೆಗಿನ ದ್ವಿಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ಇದುವರೆಗೂ ಪ್ರಾರಂಭವಾಗಿಲ್ಲ. ಈ ಸಂಬಂಧ ಕೇಂದ್ರ ಭೂ ಸಾರಿಗೆ ಸಚಿವ ನಿತಿನ ಗಡ್ಕರಿ ಅವರನ್ನು ಭೇಟಿ ಮಾಡಿ ಅಗತ್ಯ ಅನುದಾನ ಬಿಡುಗಡೆಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ತುರ್ತುಸೇವೆ ಸಂಖ್ಯೆ ಪ್ರದರ್ಶಿಸಿ:
ಹೆದ್ದಾರಿಯಲ್ಲಿ ಅಪಘಾತವಾದರೆ ತುರ್ತು ವಾಹನ ಸೇವೆ ಒದಗಿಸುವುದು ಟೋಲ್ ನಿರ್ವಹಣೆ ಮಾಡುವವರ ಜವಾಬ್ದಾರಿಯಾಗಿದೆ. ಆದರೆ ಹಿರೀಸಾವೆಯಿಂದ ಹಾಸನದವರೆಗೆ ಎಲ್ಲಿಯೂ ತುರ್ತು ಸೇವೆ ಒದಗಿಸುವ ದೂರವಾಣಿ ಸಂಖ್ಯೆಯ ಪ್ರದರ್ಶನ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಟೋಲ್‌ಗಳಲ್ಲಿ ತುರ್ತು ಸೇವಾ ವಾಹನ ಹಾಗೂ ವಿಐಪಿ ಲೇನ್ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಇದರಿಂದ ಪ್ರತಿದಿನ ಕಿರಿಕಿರಿಯಾಗಿದೆ. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅವರನ್ನು ಟೋಲ್‌ನಲ್ಲಿ ತಡೆಯಲಾಗಿದೆ. ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರನ್ನು ಸಹ ಅನೇಕ ಬಾರಿ ತಡೆದಿರುವ ಉದಾಹರಣೆಗಳಿವೆ ಜಿಲ್ಲಾಧಿಕಾರಿ ಅರ್ಚನಾ ಸಭೆಯ ಗಮನಕ್ಕೆ ತಂದರು. ಈ ಲೋಪಗಳನ್ನು ತಕ್ಷಣ ಸರಿಪಡಿಸಿಕೊಳ್ಳಬೇಕು ಎಂದು ಸಂಸದ ಪ್ರಜ್ವಲ್ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.


ರಾಷ್ಟ್ರೀಯ ಹೆದ್ದಾರಿಯಲ್ಲಿ ಅಗತ್ಯವಿದ್ದರೆ ಮಾತ್ರ ರಸ್ತೆ ಉಬ್ಬುಗಳನ್ನು ನಿರ್ಮಿಸಬೇಕು. ರಸ್ತೆ ಉಬ್ಬುಗಳು ಇರುವ ಕಡೆ ಎಚ್ಚರಿಕೆಯ ಫಲಕಗಳನ್ನು ಮತ್ತು ದೀಪಗಳನ್ನು ಅಳವಡಿಸಬೇಕು. ಹಗಲು ಮತ್ತು ರಾತ್ರಿ ವೇಳೆಯಲ್ಲಿ ಉಬ್ಬುಗಳು ದೂರದಿಂದಲೇ ಸ್ಪಷ್ಟವಾಗಿ ಕಾಣುವಂತೆ ಬಣ್ಣದ ಪಟ್ಟಿ ಬಳಿಯಬೇಕು. ಅಪಘಾತಗಳ ನಿಯಂತ್ರಣಕ್ಕೆ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.


ರಾಷ್ಟ್ರೀಯ ಹೆದ್ದಾರಿಯಿಂದ ಇಂತಿಷ್ಟು ದೂರದವರೆಗೆ ಯಾವುದೇ ಕಟ್ಟಡ ನಿರ್ಮಾಣ ಮಾಡದಂತೆ ಹೆದ್ದಾರಿ ಪ್ರಾಧಿಕಾರದ ನಿಯಮವಿದೆ. ಆದರೆ ಆಲೂರು ಪಟ್ಟಣದಲ್ಲಿ ಹೆದ್ದಾರಿ ಪಕ್ಕದಲ್ಲಿ ಹಲವು ಮನೆಗಳನ್ನು ನಿರ್ಮಿಸಲಾಗಿದೆ. ನಿಯಮ ಮೀರಿ ಹೇಗೆ ಅನುಮತಿ ನೀಡಿದಿರಿ ಎಂದು ಆಲೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿಯನ್ನು ಸಂಸದರು ತರಾಟೆಗೆ ತೆಗೆದುಕೊಂಡರು.


ಹಾಸನ-ಸಕಲೇಶಪುರ ಮಾರ್ಗದಲ್ಲಿ ದೇವಿಹಳ್ಳಿ ಬಳಿ ಮತ್ತು ಯಗಚಿ ಜಲಾಶಯದ ಬಳಿ ರಾಷ್ಟ್ರೀಯ ಹೆದ್ದಾರಿ ಗುಂಡಿ ಬಿದ್ದಿದ್ದು, ವಾಹನಗಳು ಸಂಚರಿಸಲು ಕಷ್ಟವಾಗಿದೆ. ತಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸಕಲೇಶಪುರ ಕ್ಷೇತ್ರದ ಶಾಸಕ ಎಚ್.ಕೆ. ಕುಮಾರಸ್ವಾಮಿ ಒತ್ತಾಯಿಸಿದರು.

14 ಲಕ್ಷ ರೂ. ಲಂಚ ಪಡೆದು ಕ್ರಷರ್‌ಗೆ ಅನುಮತಿ:ಹೊಳೆನರಸೀಪುರ ತಾಲೂಕಿನಲ್ಲಿ ಪರಿಸರ ಇಲಾಖೆ ಅಧಿಕಾರಿಗಳು 14 ಲಕ್ಷ ರೂ. ಲಂಚ ಪಡೆದು ಅಕ್ರಮವಾಗಿ ಜಲ್ಲಿ ಕ್ರಷರ್‌ಗೆ ಅನುಮತಿ ನೀಡಿದ್ದಾರೆ ಎಂದು ಆರೋಪ ಮಾಡಿದ ಹೊಳನರಸೀಪುರ ಶಾಸಕ ಎಚ್.ಡಿ. ರೇವಣ್ಣ, ತಾಕತ್ತು ಇದ್ದರೆ ಅರಣ್ಯ ಸಚಿವ ಆನಂದ್ ಸಿಂಗ್ ಈ ಬಗ್ಗೆ ತನಿಖೆ ನಡೆಸಲಿ. ನನ್ನ ಆರೋಪ ಸುಳ್ಳಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು.ಅಕ್ರಮವಾಗಿ 60 ಸಾವಿರ ಮೆಟ್ರಿಕ್ ಟನ್ ಜಲ್ಲಿ, ಎಂ ಸ್ಯಾಂಡ್ ತೆಗೆಯಲು ಅನುಮತಿ ನೀಡಲಾಗಿದೆ. ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಭ್ರಷ್ಟ ಅಧಿಕಾರಿ ವಿರುದ್ಧ ತನಿಖೆ ಆಗಬೇಕು. ಜಿಲ್ಲೆಯಲ್ಲಿ ಹಗಲು ದರೊಡೆ ನಡೆಯುತ್ತಿದೆ. ತನಿಖೆ ನಡೆಸಿ ಕ್ರಮ ಕೈಗೊಳ್ಳದಿದ್ದರೆ ನೀವೂ ಅವರೊಂದಿಗೆ ಶಾಮೀಲಾಗಿದ್ದೀರಿ ಎಂಬುದಾಗಿ ತಿಳಿಯಬೇಕಾಗುತ್ತದೆ ಎಂದು ಸಭೆಯಲ್ಲಿದ್ದ ಜಿಲ್ಲಾಧಿಕಾರಿ ಅರ್ಚನಾ ವಿರುದ್ಧವೂ ಅಸಮಾಧಾನ ಹೊರ ಹಾಕಿದರು.ದೊಡ್ಡವರಿಗೆ ಲೂಟಿ ಹೊಡೆಯಲು ಬಿಡುವ ಕೆಲ ಪೊಲೀಸ್ ಅಧಿಕಾರಿಗಳು ಟ್ರ್ಯಾಕ್ಟರ್ ಹಿಡಿದು ರೈತರಿಗೆ ಕಿರುಕುಳ ನೀಡುತ್ತಿದ್ದಾರೆ, ಎಸ್ಪಿ ಸರ್‌ಗೆ ನಾಲ್ಕೈದು ಸಲ ಕಾಲ್ ಮಾಡಿದರೂ ರಿಸೀವ್ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಭೆಯಲ್ಲಿ ಜಿಪಂ ಸಿಇಒ ಬಿ.ಆರ್. ಪೂರ್ಣಿಮಾ ಇದ್ದರು.

3 ಗಂಟೆ ತಡವಾಗಿ ಆರಂಭವಾದ ಸಭೆ:
ಬೆಳಗ್ಗೆ 10 ಗಂಟೆಗೆ ನಿಗದಿಯಾಗಿದ್ದ ದಿಶಾ ಸಭೆಯು ಮಧ್ಯಾಹ್ನ 1 ಗಂಟೆಗೆ ಆರಂಭವಾಯಿತು. ಸಭೆ ನಡೆಸಬೇಕಿದ್ದ ಸಂಸದ ಪ್ರಜ್ವಲ್ ರೇವಣ್ಣ ಮೂರು ಗಂಟೆ ತಡವಾಗಿ ಬಂದಿದ್ದರಿಂದ, ಬೆಳಗ್ಗೆ 10 ಗಂಟೆಗೇ ಸಭೆಗೆ ಬಂದು ಆಸೀನರಾಗಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು ಸಂಸದರ ಆಗಮನ ಎದುರು ನೋಡುತ್ತಾ ಬಸವಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net