

ಮೈಸೂರು: ಪ್ರಚೋದನಾಕಾರಿ ಹೇಳಿಕೆ ಮೂಲಕ ಸಮಾಜದ ಶಾಂತಿ ಕದಡುತ್ತಿರುವ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಪುರಭವನ ಎದುರಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಶುಕ್ರವಾರ ಪ್ರತಿಭಟನೆ ನಡೆಯಿತು.
ತಿ.ನರಸೀಪುರದಲ್ಲಿ ನಡೆದ ಕೊಲೆಯನ್ನು ವೈಭವೀಕರಿಸಿ ರಾಜಕೀಯಗೊಳಿಸಲು ಯತ್ನಿಸುತ್ತಿರುವುದು ಖಂಡನೀಯ. ಯುವ ಬ್ರಿಗೇಡ್ ಸಂಘಟನೆಯ ಚಕ್ರವರ್ತಿ ಸೂಲಿಬೆಲೆ ಹಿಂದುಳಿದ ವರ್ಗದ ಯುವಕರ ತಲೆಗೆ ಭಾವನಾತ್ಮಕ ವಿಚಾರ ತುಂಬಿ ದಾರಿ ತಪ್ಪಿಸುತ್ತಿದ್ದಾರೆ. ಮೌಢ್ಯವನ್ನೇ ಧರ್ಮದ ಭಾಗವನ್ನಾಗಿ ಮಾಡಿ, ಸುಳ್ಳನ್ನೇ ಸತ್ಯವೆಂದು ನಂಬಿಸುತ್ತಿದ್ದಾರೆ ಎಂದು ದೂರಿದರು.
ಅಲ್ಲದೆ, ಕೊಲೆ, ಹಲ್ಲೆ, ದೌರ್ಜನ್ಯದಂತಹ ಪ್ರಕರಣಗಳಲ್ಲಿ ಭಾಗಿಯಾಗಲು ಪ್ರೇರೇಪಿಸುತ್ತಿದ್ದಾರೆ. ಪ್ರಚೋದನಾಕಾರಿ ಮಾತುಗಳಿಂದ ಯುವಕರನ್ನು ಕೆರಳಿಸಿ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ನಾಯಕ್ ಕೊಲೆ ವೈಯಕ್ತಿಕ ಕಾರಣಕ್ಕೆ ಆಗಿದೆ. ಇಂತಹ ಪ್ರಕರಣಗಳ ಸಂತ್ರಸ್ತರಿಗೆ ಪರಿಹಾರ ನೀಡಿದರೆ ಕೋಮುವಾದಿ ಸಂಘಟನೆಗಳು ನಿರುದ್ಯೋಗಿ ಯುವಕರನ್ನು ಸೆಳೆದು ಅವರ ಭವಿಷ್ಯ ಹಾಳು ಮಾಡಲು ಸರ್ಕಾರವೇ ಬೆಂಬಲ ನೀಡಿದಂತಾಗುತ್ತದೆ. ಸರ್ಕಾರ ಕೊಲೆಗಡುಕರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಸಂತ್ರಸ್ತರ ಕುಟುಂಬಗಳಿಗೆ ಹಸ್ತಾಂತರಿಸುವ ವಿಶೇಷ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಭವಿಷ್ಯದಲ್ಲಿ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಿ ಕೊಲೆಗಡುಕರಿಗೆ ಕಠಿಣ ಶಿಕ್ಷೆ ನೀಡಬೇಕು. ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸುವ ಕೋಮುವಾದಿ ಸಂಘಟನೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು.
ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ದಸಂಸ ಸಂಚಾಲಕ ಚೋರನಹಳ್ಳಿ ಶಿವಣ್ಣ, ಸಂಘಟನಾ ಸಂಚಾಲಕ ಕೆ.ವಿ.ದೇವೇಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.