ಚಂಬೆಬೆಳ್ಳೂರು ಬೇಡು ಹಬ್ಬದಲ್ಲಿ ವಿವಿಧ ವೇಷಧಾರಿಗಳು

23 vtp 2 Chembebellur bode Namme
Published on

ವಿರಾಜಪೇಟೆ: ಭೋರ್ಗರೆಯುವ ಚಂಡೆ ವಾದ್ಯಗಳ ಆರ್ಭಟ, ಮೈಗೆ ಬಣ್ಣ ಹಚ್ಚಿ ನಿಜವಾದ ವ್ಯಾಘ್ರವನ್ನೂ ಬೆಚ್ಚಿ ಬೀಳಿಸುವ ಹುಲಿವೇಷಧಾರಿಗಳು, ಗ್ರಾಮದೇವತೆಗೆ ಇಷ್ಟ ಎಂದು ಮೈಗೆ ಕೆಸರು ಮೆತ್ತಿಕೊಂಡ ಗ್ರಾಮಸ್ಥರು, ಹುಲ್ಲುಭೂತ ವೇಷಧಾರಿಗಳು, ರಾಜಕಾರಣಿಗಳನ್ನು ಅನುಕರಣೆ ಮಾಡುವ ವಿಭಿನ್ನ ವ್ಯಕ್ತಿಗಳು, ಸುಡು ಬಿಸಿಲನ್ನೂ ಲೆಕ್ಕಿಸದೆ ನೃತ್ಯ ಮಾಡಿದ ಲಲನೆಯರು!


ಇದೆಲ್ಲ ಕಂಡುಬಂದಿದ್ದು ಐತಿಹಾಸಿಕ ಹಿನ್ನೆಲೆ ಹೊಂದಿರುವ ಚಂಬೆಬೆಳ್ಳೂರು ಬೇಡು ಹಬ್ಬದಲ್ಲಿ. ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರುವುದು ಈ ಹಬ್ಬದ ಮತ್ತೊಂದು ವಿಶೇಷ.


ಚಂಬೆಬೆಳ್ಳೂರ್ ಬೋಡ್ ನಮ್ಮೆ ಎಂದೇ ಹೆಸರುವಾಸಿಯಾಗಿರುವ ಹಬ್ಬವು ಪ್ರತಿ ವರ್ಷ ಏಪ್ರಿಲ್ 3ನೇ ವಾರದಲ್ಲಿ ನಡೆಯುತ್ತದೆ. ಈ ಹಬ್ಬವು ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಪಶ್ಚಿಮಾಭಿಮುಖವಾಗಿ ಇರುವ ದೇವಾಲಯವು ಪಡ್‌ಞಂರ್ ಮೊಗಬೆಚ್ಚ ಕಾಳಿ ಎಂದೇ ಪ್ರಸಿದ್ಧಿ ಪಡೆದಿದೆ. ಕೊಡವ ಕ್ಯಾಲೆಂಡರ್ ಪ್ರಕಾರ ಏ. 1ರಂದು ಎಡ್‌ಮ್ಯಾರ್, 14 ರಂದು ಕಟ್ಟುಬಿದ್ದು, 21ರಂದು ಪಟ್ಟಣಿಯ ನಂತರ ದೇವರ ಕುದುರೆ, 22ರಂದು ರಾತ್ರಿ ದೇವರ ವೇಷ ಧರಿಸುವುದರ ಮೂಲಕ ಬೇಡು ಹಬ್ಬಕ್ಕೆ ಚಾಲನೆ ನೀಡಲಾಯಿತು. ಪ್ರತಿ ಮನೆಯಿಂದ ತಲಾ ಒಬ್ಬರಿಗೊಬ್ಬರಂತೆ ವಿವಿಧ ರೀತಿಯ ವೇಷ ಧರಿಸಿ ಶನಿವಾರ ರಾತ್ರಿಯಿಡಿ ಗ್ರಾಮದ ಪ್ರತಿ ಮನೆ ಮನೆಗೆ ತೆರಳಿ ಗಳಿಸಿದ ಹಣವನ್ನು ಮರುದಿನವಾದ ಭಾನುವಾರ ಸಂಜೆ ಭದ್ರಕಾಳಿ ದೇವಾಲಯಕ್ಕೆ ಒಪ್ಪಿಸುತ್ತಾರೆ. ಈ ಹಬ್ಬಕ್ಕೆ ತವರುಮನೆ ಹೆಣ್ಣುಮಕ್ಕಳು, ಅನ್ಯಊರುಗಳಲ್ಲಿ ಕೆಲಸ ಅರಸಿ ನೆಲೆ ನಿಂತವರು ಪ್ರತಿಯೊಬ್ಬರೂ ಬಂದು ಪಾಲ್ಗೊಳ್ಳುತ್ತಾರೆ.


ಹಿನ್ನೆಲೆ: ಈ ಹಿಂದೆ ಚಂಬೆಬೆಳ್ಳೂರು ಗ್ರಾಮದಲ್ಲಿ 101 ಕುಟುಂಬಗಳು ವಾಸಿಸುತ್ತಿತ್ತು ಎಂದು ಹೇಳಲಾಗುತ್ತದೆ. ಇದೇ ಗ್ರಾಮ ಜಿಲ್ಲೆಯಲ್ಲಿ ಅತಿ ದೊಡ್ಡ ಊರೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕಾಲ ಉರುಳಿದಂತೆ ಉಳಿದಿರುವ ಅಂದಾಜು 30ಕ್ಕೂ ಹೆಚ್ಚು ಕುಟುಂಬಗಳು ಸೇರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಹಬ್ಬಕ್ಕೆ ಪ್ರತಿ ಮನೆಗೆ 20 ರಿಂದ 30 ಸಾವಿರ ರೂ.ವರೆಗೆ ಖರ್ಚು ತಗಲುತ್ತದೆ.


ಈ ಬೇಡು ಹಬ್ಬದಲ್ಲಿ ದೇವರಿಗೆ ಇಷ್ಟವಾದ ದೋಳ್‌ಪಾಟ್, ಹುಲಿವೇಷ, ಹುಲ್ಲುಭೂತ, ಕೆಸರುವೇಷ(ಬಂಡ್‌ಕಳಿ) ಕರಡಿವೇಷ ಸೇರಿದಂತೆ ಇಂದಿನ ಪರಿಸರಕ್ಕೆ ಅನುಗುಣವಾಗುವ ರೀತಿಯಲ್ಲಿ ರಾಜಕೀಯ ಮತ್ತು ವಿವಿಧ ಸ್ವಾಮೀಜಿಗಳ ವೇಷಭೂಷಣಗಳ ಅನುಕರಣೆ ಮಾಡುವುದು ವಿಶೇಷ. ಅಂದಾಜು 5 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.


ದೇವರ ಕಟ್ಟುಬಿದ್ದ ನಂತರ ಊರಿನಲ್ಲಿ ಯಾವುದೇ ಪ್ರಾಣಿವಧೆ, ಹಸಿಮರ ಕಡೆಯುವುದು, ತೆಂಗಿನಕಾಯಿಗೆ ಗುಂಡು ಹೊಡೆಯುವುದು ನಿಷೇಧವಾಗಿದೆ. ಈ ನಿಷೇಧವನ್ನು ಮುರಿಯುವ ಸಲುವಾಗಿ ವೇಷಧಾರಿಗಳು ಸೇರಿದಂತೆ ಊರಿನ ಜನರು ದೇವಸ್ಥಾನ ಪ್ರವೇಶಿಸುವಾಗ ಹಸಿಮರ ಕಡಿಯುವ ಪ್ರತೀಕವಾಗಿ ಹಸಿ ಸೊಪ್ಪನ್ನು ದೇವರಿಗೆ ಅರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net