ಚಂದ್ರಿಕಾ ಮೇಲೆ ಶಿಸ್ತು ಕ್ರಮ ಕೈಗೊಳ್ಳದಿದ್ದಾರೆ ಹೋರಾಟ

ಚಂದ್ರಿಕಾ ಮೇಲೆ ಶಿಸ್ತು ಕ್ರಮ ಕೈಗೊಳ್ಳದಿದ್ದಾರೆ ಹೋರಾಟ
Published on

ಹಾಸನ: ಹೊಳೆನರಸೀಪುರ ಹಾಗೂ ತಾಲೂಕಿನ ವಿವಿಧ ಪ್ರೀ ಮೆಟ್ರಿಕ್ ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಮೇಲ್ವಿಚಾರಕರಾಗಿರುವ ಚಂದ್ರಿಕಾ ಎಂಬುವರು ರಾಜಕೀಯ ಪ್ರಭಾವ ಕಾರಣಕ್ಕೆ ಹಲವು ರೀತಿಯ ಕರ್ತವ್ಯ ಲೋಪ ಮಾಡುತ್ತಿದ್ದು, ಇನ್ನಾದರೂ ಅವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಜಿಲ್ಲಾ ಜಿಲ್ಲಾ ಸಮಾಜ ಕಲ್ಯಾಣ ಉಪ ನಿರ್ದೇಶಕರ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಸೋಮಶೇಖರ್ ಎಚ್ಚರಿಸಿದರು.
ಸಮಾಜ್ಯ ಕಲ್ಯಾಣ ಇಲಾಖೆಯಡಿ ನಡೆಯುವ ಎಲ್ಲಾ ಹಾಸ್ಟೆಲ್‌ಗಳಿಗೆ ಸರ್ಕಾರ ಬೇಕಾದ ಸೌಲಭ್ಯ, ಸವಲತ್ತು ನೀಡಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅಭ್ಯುದಯಕ್ಕಾಗಿ ಮುಂದಾಗಿದೆ. ಆದರೆ ಇಲಾಖೆಯ ನಿಲಯ ಪಾಲಕರಾದ ಚಂದ್ರಿಕಾ ಅವರು ಎಲ್ಲಾ ನಿಯಮಾವಳಿ ಗಾಳಿಗೆ ತೂರಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಹಾಸನದಲ್ಲಿ ಕೆಲಸ ಮಾಡಬೇಕಿರುವ ಇವರು, ರಾಜಕೀಯ ಪ್ರಭಾವರಿಂದ ಹೊಳೆನರಸೀಪುರ ಹಾಗೂ ತಾಲ್ಲೂಕಿನ ಚಾಕೇನಹಳ್ಳಿಕಟ್ಟೆ, ದೊಡ್ಡ ಕುಂಚೇವು ಬಾಲಕಿಯರ ಪ್ರೀ ಮೆಟ್ರಿಕ್ ಹಾಸ್ಟೆಲ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲಿಗೆ ತಮ್ಮ ಪತಿಯನ್ನೇ ಕಾವಲುಗಾರರನ್ನಾಗಿ ನೇಮಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಚಾಕೇನಹಳ್ಳಿ ವಿದ್ಯಾರ್ಥಿ ನಿಲಯದಲ್ಲಿ ನಿಲಯ ಪಾಲಕರಾಗಿದ್ದಾಗ ಸ್ವತಃ ಸೀಮೆ ಹಸುಗಳನ್ನು ತಂದು ಹಾಸ್ಟೆಲ್ ಆವರಣವನ್ನೇ ಕೊಟ್ಟಿಗೆ ಮಾಡಿಕೊಂಡಿದ್ದರು. ಇದು ಇಲಾಖೆಯ ಗಮನಕ್ಕೂ ಬಂದಿದೆ.ವಿದ್ಯಾರ್ಥಿಗಳಿಗೆ ಸರಿಯಾಗಿ ಆಹಾರ ನೀಡದೆ, ಬೇಕಾಬಿಟ್ಟಿ ಆಹಾರ ನೀಡಿ ಅವರ ಆರೋಗ್ಯ ಕಡೆಗಣಿಸಿದ್ದಾರೆ ಎಂದರು.
ಈ ಸಂಬಂಧ ಜಿಲ್ಲಾಧಿಕಾರಿ, ಡಿಎಸ್‌ಡಬ್ಲ್ಯೂ, ಜಿಪಂ ಸಿಇಒ, ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಚಂದ್ರಿಕಾ ಅವರನ್ನು ಕೂಡಲೇ ವರ್ಗಾವಣೆ ಮಾಡುವಂತೆ ಸೂಚಿಸಿ, ತನಿಖೆಗೂ ಆದೇಶಿಸಿದ್ದರು. ಅದರಂತೆ ಹಿಂದೆ ಡಿಎಸ್‌ಡಬ್ಲ್ಯೂ ಆಗಿದ್ದ ಲಕ್ಷ್ಮೇಗೌಡ ಅವರು ತನಿಖೆ ಮಾಡಲು ಹೋದಾಗ ಅವರಿಗೂ ಧಮ್ಕಿ ಹಾಕಲಾಗಿದೆ ಎಂದರು.
ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಸಹಕಾರದಿಂದ ಅಲ್ಲಿಯೇ ಉಳಿದು ತೊಂದರೆ ಕೊಡುತ್ತಿರುವ ಚಂದ್ರಿಕಾ ಅವರ ದರ್ಬಾರ್‌ನಿಂದ ಮಕ್ಕಳು ನೊಂದು ಹೋಗಿದ್ದಾರೆ.
ಎಸ್‌ಸಿ,ಎಸ್‌ಟಿ ವರ್ಗಗಳ ಮೇಲುಸ್ತುವಾರಿ ಸಭೆಯಲ್ಲಿ ಸದರಿ ವಿಚಾರ ಪ್ರಸ್ತಾಪಿಸಿದಾಗ ಚಂದ್ರಿಕಾ ಅವರನ್ನು ಅವರ ಮೂಲ ಜಾಗಕ್ಕೆ ಕಳುಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರೂ, ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಚಂದ್ರಿಕಾ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ಅವರನ್ನು ಅಮಾನತ್ತು ಮಾಡಬೇಕು. ಈಗಲೂ ಸಂಬಂಧಪಟ್ಟ ಅಧಿಕಾರಿಗಳು ಹಿಂದೇಟು ಹಾಕಿದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಟಿಯಲ್ಲಿ ಹಿರಿಯ ದಂಸಸ ಮುಖಂಡ ಹೆಚ್.ಕೆ. ಸಂದೇಶ್, ಟಿ.ಆರ್. ವಿಜಯಕುಮಾರ್, ಎಂ.ಜಿ. ಪೃಥ್ವಿ, ವಳಲಹಳ್ಳಿ ವೀರೇಶ್, ರವೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net