

ಬೀದರ್: ದಕ್ಷಿಣ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಗುರುವಾರ ಮಾಜಿ ಸಿಎಂ ಧರ್ಮಸಿಂಗ್ ಅಳಿಯ ಚಂದ್ರಾಸಿಂಗ್ ನಾಮಪತ್ರ ಸಲ್ಲಿಸಿದರು.
ಇಲ್ಲಿನ ಸಿದ್ಧಾರೂಢ ಗುಂಪಾದ ತಮ್ಮ ನಿವಾಸದಿಂದ ಮೆರವಣಿಗೆಯ ಮೂಲಕ ತಹಸೀಲ್ದಾರ್ ಕಚೇರಿಗೆ ಸಾವಿರಾರು ಬೆಂಬಲಿಗರು, ಕಾರ್ಯಕರ್ತರೊಂದಿಗೆ ಆಗಮಿಸಿದ ಚಂದ್ರಾಸಿಂಗ್ ಅವರು ನಾಮಪತ್ರವನ್ನು ಚುನಾವಣಾಧಿಕಾರಿಯಾದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಉಪ ನಿರ್ದೇಶಕಿ ಸುರೇಖಾ ಅವರಿಗೆ ಸಲ್ಲಿಸಿದರು.
ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಚಂದ್ರಾಸಿಂಗ್ ಅವರಿಗೆ ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಯೂಸೂಫ್ ಅಲಿ ಜಮಾದಾರ, ನಾರಾಯಣರಾವ್ ಭಂಗಿ, ಅಶೋಕರಡ್ಡಿ ನಿರ್ಣಾ ಮತ್ತು ಪತ್ನಿ ಪ್ರಿಯದರ್ಶಿನಿ ಸೂಚಕರಾಗಿ ಸಾಥ್ ನೀಡಿದರು. ಇದಕ್ಕೂ ಮುನ್ನ ಕ್ಷೇತ್ರದ ಹಲವು ಮಂದಿರಗಳಿಗೆ ತೆರಳಿ ದೇವರ ಆಶೀರ್ವಾದ ಪಡೆದುಕೊಂಡರು.
ಗುಂಪಾದಿಂದ ಮುಖ್ಯ ರಸ್ತೆಯ ಮಾರ್ಗವಾಗಿ, ಬೊಮ್ಮಗೊಂಡೇಶ್ವರ ವೃತ್ತ. ಬಸವೇಶ್ವರ ವೃತ್ತದ ಮೂಲಕ ಭವ್ಯ ಮೆರವಣಿಗೆ ನಡೆಯಿತು. ಎತ್ತಿನ ಬಂಡಿಯಲ್ಲಿ ಚಂದ್ರಾಸಿಂಗ್ ಅವರನ್ನು ಮೆರವಣಿಗೆಯ ಮೂಲಕ ತಹಸಿಲ್ ಕಚೆರಿಗೆ ಕರೆ ತರಲಾಯಿತು. ಮಾರ್ಗದ ಉದ್ದಕ್ಕೂ ನೆರೆದಿದ್ದ ಜನರತ್ತ ಕೈ ಬೀಸುತ್ತ ಬಂದ ಚಂದ್ರಾಸಿಂಗ್ ಸಹಸ್ರಾರು ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಬಂದು ನಾಮಪತ್ರ ಸಲ್ಲಿಸಿದರು.
ದಕ್ಷಿಣ ಕ್ಷೇತ್ರದ ಹಲವು ಗ್ರಾಮಗಳಿಂದ ಸಾವಿರಾರು ಕಾರ್ಯಕರ್ತರು, ಬೆಂಬಲಿಗರು ಆಗಮಿಸಿ ಬೆಂಬಲ ಸೂಚಿಸಿದರು. ಬಿಸಿಲನ್ನೂ ಲೆಕ್ಕಿಸದ ಜನರು ರಸ್ತೆಯ ಎರಡೂ ಕಡೆ ನಡೆದುಕೊಂಡು ಬಂದರು. ಚಂದ್ರಾಸಿಂಗ್ ಪರ ಜಯಘೋಷಗಳನ್ನು ಕೂಗಿದರು.